
ಬೆಂಗಳೂರು: ಹಸೆಮಣೆಯೇರಿದ ಖ್ಯಾತ ನಿರೂಪಕಿ ಅನುಶ್ರೀ
ಬೆಂಗಳೂರು: ನಟಿ, ಖ್ಯಾತ ನಿರೂಪಕಿ ಅನುಶ್ರೀ ಅವರು ಇಂದು ರೋಷನ್ ಜೊತೆ ವಿವಾಹವಾಗಿದ್ದಾರೆ. ಎಲ್ಲರಿಗೂ ಗೊತ್ತಿರುವಂತೆ ಅನುಶ್ರೀ, ಪುನೀತ್ ರಾಜ್ಕುಮಾರ್ ಅವರ ಬಲುದೊಡ್ಡ ಅಭಿಮಾನಿ. ಮದುವೆಯ ದಿನ ಮದುವೆಯ ಹಾಲ್ನಲ್ಲಿ ಪುನೀತ್ ರಾಜ್ಕುಮಾರ್ ಅವರ ದೊಡ್ಡ ಚಿತ್ರವೊಂದನ್ನು ಇರಿಸಿ ಚಿತ್ರವನ್ನು ಹೂವುಗಳಿಂದ ಅಲಂಕರಿಸಲಾಗಿದೆ.ನೂತನ ದಂಪತಿ ವಿವಾಹದ ಬಳಿಕ ಅಪ್ಪು ಅವರ ಚಿತ್ರದ ಮುಂದೆ ನಿಂತು ಕೈ ಮುಗಿದು ಆಶೀರ್ವಾದ ಪಡೆದರು.
ಅನುಶ್ರೀ ಹಾಗೂ ರೋಷನ್ ಅದ್ಧೂರಿ ಮದುವೆಗೆ ರಾಜ್ ಬಿ ಶೆಟ್ಟಿ, ನೆನಪಿರಲಿ ಪ್ರೇಮ್, ಕಾವ್ಯ ಶಾ, ಸೋನಲ್ ಮೊಂಥೆರೋ, ನಟ ನಾಗಭೂಷಣ್, ಚೈತ್ರಾ ಜೆ ಆಚಾರ್, ನಟ ಶರಣ್ ಸೇರಿದಂತೆ ಸಾಕಷ್ಟು ಸ್ಟಾರ್ ಸೆಲೆಬ್ರಿಟಿಗಳು ಬಂದು ನವಜೋಡಿಗೆ ಶುಭ ಹಾರೈಸಿದ್ದಾರೆ.
ವಿವಾಹದ ಬಳಿಕ ಅನುಶ್ರೀ ಅವರು ಮೊದಲ ಪ್ರತಿಕ್ರಿಯೆ ನೀಡಿದ್ದು ,‘ರೋಷನ್ ರಾಮಮೂರ್ತಿ ಕುಶಾಲ ನಗರದವರು. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ರೋಷನ್ ಅಪ್ಪು ಸರ್ ಅಭಿಮಾನಿ. ಪುನೀತ ಪರ್ವದಲ್ಲಿ ನಾನು ಅವರನ್ನು ಭೇಟಿ ಮಾಡಿದೆ. ಪುನೀತ್ ಅವರೇ ನಮ್ಮನ್ನು ಸೇರಿಸಿದ್ದಾರೆ ಎಂದಿದ್ದಾರೆ ಅನುಶ್ರೀ.