
ಬೆಂಗಳೂರು: ಬಾಲಕನ ಅಪಹರಿಸಿ ಹತ್ಯೆ ಪ್ರಕರಣ- ಆರೋಪಿಗಳಿಗೆ ಪೊಲೀಸರ ಗುಂಡೇಟು , ಬಂಧನ !
ಬೆಂಗಳೂರು: ನಿಶ್ಚಿತ್ ಎಂಬ ಬಾಲಕನನ್ನು ಅಪಹರಿಸಿ ಬನ್ನೇರುಘಟ್ಟ ಸಮೀಪ ಕೊಲೆ ಮಾಡಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಾದ ಗುರುಮೂರ್ತಿ ಮತ್ತು ಗೋಪಾಲಕೃಷ್ಣ ಅವರ ಕಾಲಿಗೆ ಗುಂಡು ಹಾರಿಸಿ ಅವರನ್ನು ಬಂಧಿಸುವಲ್ಲಿ ಪೊಲಿಸರು ಯಶಸ್ವಿಯಾಗಿದ್ದಾರೆ. ಪೊಲೀಸ್ ಕಾರ್ಯಾಚರಣೆ ವೇಳೆ ಬನ್ನೇರುಘಟ್ಟ ಠಾಣಾ ವ್ಯಾಪ್ತಿಯ ಕಗ್ಗಲಿಪುರ ರಸ್ತೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಇದರೊಂದಿಗೆ, ಘಟನೆ ಸಂಭವಿಸಿದ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಪೊಲೀಸರು ಬಂಧಿಸಿದಂತಾಗಿದೆ.
ಆರೋಪಿಗಳಾದ ಗುರುಮೂರ್ತಿ ಮತ್ತು ಗೋಪಾಲಕೃಷ್ಣ ಕುರಿತು ದೊರೆತ ಖಚಿತ ಮಾಹಿತಿ ಮೇರೆಗೆ ಬನ್ನೇರುಘಟ್ಟ ಪೊಲೀಸರು ಸ್ಥಳಕ್ಕೆ ತೆರಳಿದ್ದರು. ಆ ಸಂದರ್ಭದಲ್ಲಿ, ಆರೋಪಿಗಳು ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆಗೆ ಯತ್ನಿಸಿದ್ದಾರೆ. ಆಗ, ಹುಳಿಮಾವು ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಕುಮಾರಸ್ವಾಮಿ ಮತ್ತು ಪಿಎಸ್ಐ ಅರವಿಂದ ಕುಮಾರ್ ಆರೋಪಿಗಳ ಮೇಳೆ ಗುಂಡಿನ ದಾಳಿ ನಡೆಸಿದ್ದಾರೆ. ಪೊಲೀಸರು ಆತ್ಮರಕ್ಷಣೆಗಾಗಿ ಒಟ್ಟು 6 ಸುತ್ತು ಗುಂಡು ಹಾರಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಜಯನಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹುಳಿಮಾವು ಠಾಣೆಯಲ್ಲಿ ನಿಶ್ಚಿತ್ ಅಪಹರಣ ಪ್ರಕರಣ ದಾಖಲಾಗಿತ್ತು.