
ಉಡುಪಿ: ಮತ್ತೊಂದು ಡಿಜಿಟಲ್ ಅರೆಸ್ಟ್ ಪ್ರಕರಣ- 6 ಲಕ್ಷ ರೂ. ಕಳೆದುಕೊಂಡ ಮಹಿಳೆ !
ಉಡುಪಿ: ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಮಹಿಳೆಯೊಬ್ಬರಿಗೆ ಲಕ್ಷಾಂತರ ರೂಪಾಯಿ ವಂಚಿಸಿದ ಬಗ್ಗೆ ದೂರು ದಾಖಲಾಗಿದೆ.
ಉಡುಪಿಯ ಲಿಯೋಲ್ಲಾ ಅವರಿಗೆ ಜು. 22ರಂದು ಬೆಳಗ್ಗೆ ಕರೆ ಬಂದಿದ್ದು, ತಾವು ಟೆಲಿಕಾಮ್ ರೆಗ್ಯುಲೇಟರಿ ಆಫ್ ಇಂಡಿಯಾದವರು ಎಂದು ಪರಿಚಯಿಸಿಕೊಂಡು ನಿಮ್ಮ ಸಿಮ್ ಕಾರ್ಡ್‌ನಲ್ಲಿ ಕಿರುಕುಳ ಮತ್ತು ಸುಳ್ಳು ಜಾಹೀರಾತು ಬಗ್ಗೆ ಹಲವಾರು ದೂರುಗಳು ದಾಖಲಾಗಿವೆ. ನಾವು ಮುಂಬಯಿ ಸೈಬರ್ ಪೊಲೀಸರಿಗೆ ಕರೆಯನ್ನು ವರ್ಗಾವಣೆ ಮಾಡುತ್ತೇವೆ ಅವರೊಂದಿಗೆ ಮಾತನಾಡಿ ಎಂದು ಹೇಳಿದರು. ಅನಂತರ ಮಧ್ಯಾಹ್ನ ಮತ್ತೆ ವಾಟ್ಸ್‌ಆ್ಯಪ್ ಕರೆ ಬಂದಿದ್ದು ಪೊಲೀಸ್ ಸಮವಸ್ತ್ರದಲ್ಲಿದ್ದವರು ಮಾತನಾಡಿ, ನಿಮ್ಮ ಆಧಾರ್ ಕಾರ್ಡ್ ನರೇಶ್ ಗೊಯೆಲ್ ಮನಿ ಲಾಂಡ್ರಿಂಗ್ ಕೇಸ್‌ನಲ್ಲಿದೆ ಎಂದರು. ಬಳಿಕ ಹಲವಾರು ಪ್ರಶ್ನೆ ಮಾಡಿ ನಿಮ್ಮ ಮೇಲೆ ವಾರಂಟ್ ಹೊರಡಿಸಿ ದಸ್ತಗಿರಿ ಮಾಡುತ್ತೇವೆ ಎಂದು ಹೆದರಿಸಿ 24 ಗಂಟೆಯವರೆಗೆ ವಾಟ್ಸ್ಆ್ಯಪ್ ವೀಡಿಯೋ ಕಾಲ್‌ನಲ್ಲಿಯೇ ಇರುವಂತೆ ತಿಳಿಸಿದರು. ಮರುದಿನ ಮಧ್ಯಾಹ್ನ ಕರೆ ಬಂದಿದ್ದು ಅದರಲ್ಲಿ ನೀವು ಯಾವ ಕಡೆಯೂ ಹೋಗದೆ ನಿಮ್ಮ ಮೊಬೈಲ್ ಫೋನ್‌ನ ಡಾಟಾ ಆಫ್ ಮಾಡದೇ ಇರಬೇಕು.ನಾವು ನಿಮ್ಮನ್ನು ವೀಕ್ಷಣೆ ಮಾಡುತ್ತೇವೆ. ಉಲ್ಲಂಘನೆ ಮಾಡಿದರೆ ಬಂಧನ ಮಾಡುತ್ತೇವೆ ಎಂದು ಮತ್ತೆ ಹೆದರಿಸಿದ್ದಾರೆ. ಅನಂತರ ಜು. 25ರಂದು ಆರೋಪಿಗಳು ನೀಡಿದ ಬ್ಯಾಂಕ್ ಖಾತೆಗೆ 2 ಲ.ರೂ. ಮತ್ತು 4 ಲ.ರೂ. ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ್ದಾರೆ ಎಂದು ಲಿಯೋಲ್ಲಾ ಅವರು ದೂರಿನಲ್ಲಿ ತಿಳಿಸಿದ್ದಾರೆ. ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.