
ಬೆಂಗಳೂರು: ಅಪಪ್ರಚಾರ ವಿರುದ್ಧ ಧರ್ಮಸ್ಥಳ ಚಲೋ ಅಭಿಯಾನ-ಧರ್ಮಸ್ಥಳದತ್ತ ಹೊರಟ ಬಿಜೆಪಿ ಶಾಸಕರ ನೇತೃತ್ವದ 400 ಕ್ಕೂ ಹೆಚ್ಚು ಕಾರುಗಳು
ಬೆಂಗಳೂರು: ಧರ್ಮಸ್ಥಳ ಕುರಿತು ನಡೆಯುತ್ತಿರುವ ಅಪಪ್ರಚಾರ, ಅವ ಹೇಳನ ಖಂಡಿಸಿ ಬಿಜೆಪಿ ಶಾಸಕ ಎಸ್.ಆರ್. ವಿಶ್ವನಾಥ್ ನೇತೃತ್ವದಲ್ಲಿ ಧರ್ಮಸ್ಥಳ ಚಲೋ ಅಭಿಯಾನಕ್ಕೆ ಚಾಲನೆ ದೊರಕಿತು.
ನೆಲಮಂಗಲ ಟೋಲ್ ಬಳಿಯಿಂದ ಸುಮಾರು 400ಕ್ಕೂ ಹೆಚ್ಚು ವಾಹನಗಳಲ್ಲಿ ಯಲಹಂಕ ಕ್ಷೇತ್ರದ ಭಕ್ತರ ಹಾಗೂ ಬಿಜೆಪಿ ಕಾರ್ಯಕರ್ತರೊಂದಿಗೆ ಅವರು ಶ್ರೀ ಕ್ಷೇತ್ರಕ್ಕೆ ಪ್ರಯಾಣ ಆರಂಭಿಸಿದ್ದಾರೆ. ಸಂಜೆ ಧರ್ಮಸ್ಥಳದ ಮಂಜುನಾಥನ ವಿಶೇಷ ದರ್ಶನ ಪಡೆದು, ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು ಎಂಬ ಬೇಡಿಕೆಯೊಂದಿಗೆ ಸಂಕಲ್ಪ ಮಾಡಲಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವನಾಥ್, ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಖಂಡಿಸಿ ಧರ್ಮಸ್ಥಳಕ್ಕೆ ಹೋಗುತ್ತಿದ್ದೇವೆ. ಸಂಜೆ ಮಂಜುನಾಥ ಸ್ವಾಮಿ ದರ್ಶನ ಪಡೆದು ಸಂಕಲ್ಪ ಮಾಡುತ್ತೇವೆ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು ಎಂದು ಸಂಕಲ್ಪ ಮಾಡುತ್ತೇವೆ ಎಂದರು.
ಬೆಂಗಳೂರಿನಿಂದ ಹೊರಟ ಬೃಹತ್ ರ್ಯಾಲಿಗೆ ಬೂವನಹಳ್ಳಿ ಬೈಪಾಸ್ನಲ್ಲಿ ಮಹಿಳೆಯರು ಆರತಿ ಬೆಳಗಿ ಸ್ವಾಗತ ಕೋರಿದರು.ಸ್ವಾಗತ ಕೋರುತ್ತಿದ್ದಂತೆ ಧರ್ಮಸ್ಥಳದೊಂದಿಗೆ ನಾವಿದ್ದೇವೆ ಎಂಬ ಘೋಷ ವಾಕ್ಯವನ್ನು ಕಾರ್ಯಕರ್ತರು ಕೂಗಿದರು.
ನೆಲಮಂಗಲ-ಕುಣಿಗಲ್ ರಸ್ತೆಯ ಕುಣಿಗಲ್ ಟೋಲ್ಗೇಟ್‌ನಿಂದ ಯಾತ್ರೆ ಆರಂಭಗೊಂಡು ಹಾಸನದಿಂದ ಸಕಲೇಶಪುರದ ಮೂಲಕ ಶಿರಾಡಿಘಾಟ್ ರಸ್ತೆ ಮಾರ್ಗವಾಗಿ ರ್ಯಾಲಿ ಧರ್ಮಸ್ಥಳಕ್ಕೆ ತೆರಳಲಿದೆ. ರ್ಯಾಲಿಯಲ್ಲಿ ನೂರಾರು ಜನ ಭಗವಾಧ್ವಜ ಹಿಡಿದು ಕೇಸರಿ ಶಾಲು ಧರಿಸಿ ಉತ್ಸಾಹದಿಂದ ಪಾಲ್ಗೊಂಡಿದ್ದರು.