ಉಡುಪಿ: ರಾಜ್ಯ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ಆರೋಪಿಸಿ ಹಿಂದೂ ಜಾಗರಣ ವೇದಿಕೆ ಉಡುಪಿಯಲ್ಲಿ ಪ್ರತಿಭಟನೆ ನಡೆಸಿತು. ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಜಮಾಯಿಸಿದ ನೂರಾರು ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.
ಸಿದ್ದರಾಮಯ್ಯ ಸರ್ಕಾರ ಕಾರ್ಯಕರ್ತರನ್ನು ಟಾರ್ಗೆಟ್ ಮಾಡುತ್ತಿದೆ. ಜಿಲ್ಲಾ ಪ್ರವೇಶಕ್ಕೆ ನಿರ್ಬಂಧ ಹೇರುವ ಮೂಲಕ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿದೆ ಎಂದು ವಿಶ್ವ ಹಿಂದೂ ಪರಿಷತ್ತು ಮುಖಂಡ ಸುನಿಲ್ ಕೆ ಆರ್ ಆಕ್ರೋಶ ವ್ಯಕ್ತಪಡಿಸಿದರು.
ಕರಾವಳಿಯನ್ನು ಗಲಭೆ ಪೀಡಿತ ಪ್ರದೇಶ ಎಂದು ಬಿಂಬಿಸಲಾಗುತ್ತಿದೆ, ಸಿದ್ದರಾಮಯ್ಯ ಕರಾವಳಿ ಹಿಂದುತ್ವದ ಫ್ಯಾಕ್ಟರಿ ಎಂದು ಹೇಳುತ್ತಿದ್ದರು. ಈಗ ಫ್ಯಾಕ್ಟರಿಯನ್ನು ಮುಚ್ಚುವ ಕೆಲಸಕ್ಕೆ ಮುಂದಾಗಿದ್ದಾರೆ. ಇದು ಅವರ ಕನಸಿನಲ್ಲೂ ಸಾಧ್ಯವಿಲ್ಲ. ಅಲ್ಪಸಂಖ್ಯಾತ ತುಷ್ಟೀಕರಣದ ಸರ್ಕಾರ ರಾಜ್ಯದಲ್ಲಿ ಕಾರ್ಯಾಚರಿಸುತ್ತಿದೆ. ಕೋಮು ನಿಗ್ರಹ ದಳ ರಚಿಸಿ ಹಿಂದೂಗಳ ಮೇಲೆ ದಬ್ಬಾಳಿಕೆ ಮಾಡಲು ಹೊರಟಿದ್ದಾರೆ.
ಮೊದಲು ಲವ್ ಜಿಹಾದ್, ಗೋ ಹತ್ಯೆ ತಡೆಯಿರಿ, ಆಮೇಲೆ ಕೆಪಿಸಿಸಿಯ ಸತ್ಯ ಶೋಧನಾ ಸಮಿತಿ ಕಳುಹಿಸಿ. ನಿಮ್ಮ ನಿಯೋಗ ಕಂಡುಕೊಂಡ ಸತ್ಯ ಏನು? ಒಂದು ಕೈ ಯಿಂದ ಚಪ್ಪಾಳೆ ಹೊಡೆಯಲು ಹೋದರೆ ನಿಮ್ಮದೇ ಕೆನ್ನೆಗೆ ಏಟು ಬೀಳಲಿದೆ. ನಮ್ಮದು ಶಿವಾಜಿ ವಂಶ, ತಡೆಯಲು ಬಂದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಭಾಷಣ, ಪ್ರತಿಭಟನೆ ಪ್ರೆಸ್ ಮೀಟ್ ಮಾಡಿದವರ ಮೇಲೆ ಸಿದ್ದರಾಮಯ್ಯ ಸರ್ಕಾರ ಪೊಲೀಸ್ ಮೂಲಕ ಕೇಸ್ ಹಾಕಿಸುತ್ತಿದೆ, ಇದನ್ನು ಸಹಿಸಲು ಸಾಧ್ಯವಿಲ್ಲ ಎಂದರು.
