ಬೆಳ್ಮಣ್ ದುರ್ಗಾಪರಮೇಶ್ವರಿ ದೇವಳದಲ್ಲಿ ಗೃಹ ಸಚಿವ ಜಿ.ಪರಮೇಶ್ವರ್ ಚಂಡಿಕಾ ಯಾಗ- ಲೋಕಕಲ್ಯಾಣಕ್ಕಾಗಿ ಪೂಜೆ



ಬೆಳ್ಮಣ್ : ಗೃಹ ಸಚಿವ ಜಿ.ಪರಮೇಶ್ವರ್‌ ಕುಟುಂಬದ ಸೇವಾರೂಪದ ಮಹಾ ಚಂಡಿಕಾಯಾಗ ಮಂಗಳವಾರ ಬೆಳ್ಮಣ್ ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ನಡೆಯಿತು. 

ಕ್ಷೇತ್ರದ ಆಡಳಿತ ಮೊಕ್ತೇಸರ ವೇದಮೂರ್ತಿ ಬಿ.ವಿಘ್ನೇಶ್ ಭಟ್‌ರವರ ನೇತೃತ್ವದಲ್ಲಿ ವಿಶೇಷ ಪೂಜೆ ಮಹಾ ಚಂಡಿಕಾಯಾಗ, ಅನ್ನ ಸಂತರ್ಪಣೆ ನೆರವೇರಿತು. ಗೃಹ ಸಚಿವ ಜಿ.ಪರಮೇಶ್ವರ್ ಪತ್ನಿ ಜತೆ ಪೂಜೆಯಲ್ಲಿ ಭಾಗವಹಿಸಿದ್ದರು. ಪ್ರಸಾದ ಸ್ವೀಕರಿಸಿ ಬಳಿಕ ಮಾತನಾಡಿದ  ಅವರು ಜನಕಲ್ಯಾಣ ಹಾಗೂ ಲೋಕ ಕಲ್ಯಾಣಾರ್ಥವಾಗಿ  ಪೂಜೆ ನಡೆಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಮಂಗಳೂರು ಭಾಗದಲ್ಲಿ ಕೊಲೆಗಳು ನಡೆಯುತ್ತಾ ಇದ್ದು ಕೊಲೆಗಳನ್ನು ನಿಯಂತ್ರಿಸಲು ವಿಶೇಷ ತಂಡವನ್ನು ರಚನೆ ಮಾಡಲಾಗಿದೆ .ಅಲ್ಲದೆ ಕೆಲವೊಂದು ಅಧಿಕಾರಿಗಳನ್ನು ಕೂಡ ಬದಲಿಸಿದ್ದೇವೆ .ಬುಧವಾರ ಮಂಗಳೂರಿನಲ್ಲಿ ಶಾಂತಿ ಸಭೆ ನಡೆಸಲು ತೀರ್ಮಾನ ಮಾಡಲಾಗಿದೆ. ಈ ಸಭೆ ಯಾವುದೇ ಒಂದು ಜಾತಿ ಧರ್ಮ ಪಕ್ಷಕ್ಕೆ ನಡೆಯದೆ ಧರ್ಮಾತೀತ ಹಾಗೂ ಪಕ್ಷಾತೀತವಾಗಿ ನಡೆಯಲಿದೆ. ಸಮಾಜದ ಧಾರ್ಮಿಕ ಮುಖಂಡರು ಸಹಿತ ಜನಪ್ರತಿನಿಧಿಗಳು ಭಾಗವಹಿಸುತ್ತಾರೆ. ಸಮಾಜಕ್ಕೆ ಶಾಂತಿಯ ಸಂದೇಶ ಸಾರಲು ಈ ಸಭೆ ನಡೆಯಲಿದೆ ಎಂದರು.ವಿಶೇಷ ತಂಡ ರಚನೆಯ ಬಗ್ಗೆ ಬಿಜೆಪಿ ನಾಯಕರ ವಿರೋಧದ ಬಗ್ಗೆ ಉತ್ತರಿಸಿದ ಅವರು,ಈ ವಿಭಾಗ ಶಾಶ್ವತವಾಗಿ ಉಳಿಯುವುದಿಲ್ಲ ಮಾತ್ರವಲ್ಲ ,ಉಳಿಯಬಾರದು ಕೂಡ.ಶಾಂತಿ ಇರಬೇಕು ಎಂಬುದೇ ನಮ್ಮ ಉದ್ದೇಶ.ಕರಾವಳಿ ಪ್ರದೇಶ ಎಂದರೆ ಘಟ್ಟದ ಮೇಲಿನ ನಮಗೆ ವಿಶೇಷ ಗೌರವ,ಆದರೆ ಇತ್ತೀಚಿನ ದಿನಗಳಲ್ಲಿ ಗೌರವಕ್ಕೆ ಚ್ಯುತಿ ಬರುವ ಹಾಗಾಗಿದೆ. ಇದು ಶಾಶ್ವತವಾಗಿ ಉಳಿಯುವುದಿಲ್ಲ.ಶಾಂತಿ ಸಭೆಯ ಬಳಿಕ ಇಲ್ಲಿ ಮರುಶಾಂತಿ ಸ್ಥಾಪನೆಗೊಳ್ಳಲಿದೆ ಎಂದರು.

ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ  ಯಾವ ಗುಟ್ಟನ್ನೂ ಸಚಿವರು ಬಿಟ್ಟು ಕೊಡಲಿಲ್ಲ.ಸಚಿವರು ಬೆಳಿಗ್ಗೆ 9.30ಕ್ಕೆ ಕ್ಷೇತ್ರಕ್ಕಾಗಮಿಸಿದ್ದು ವಿಶೇಷ ಬಂದೋ ಬಸ್ತ್ ಕಲ್ಪಿಸಲಾಗಿತ್ತು. ಕಾರ್ಕಳದ  ಕಾಂಗ್ರೆಸ್ ನಾಯಕರಾದ ಮುನಿಯಾಲು ಉದಯ ಕುಮಾರ್ ಶೆಟ್ಟಿ  , ಮುಂಬಯಿನ ಉದ್ಯಮಿಗಳಾದ ಕರುಣಾಕರ ಶೆಟ್ಟಿ ಪೆನಿನ್ಸುಲಾ, ಪರ್ವತ್ ಶೆಟ್ಟಿ , ಅವಿನಾಶ್ ಮಲ್ಲಿ, ದೀಪಕ್ ಕೋಟ್ಯಾನ್, ಪ್ರದೀಪ್ ಬೇಲಾಡಿ, ಗೋಪಿನಾಥ ಭಟ್ ಉಪಸ್ಥಿತದ್ದರು. ದೇವಸ್ಥಾನದಲ್ಲಿ ಪೂಜೆ ಪೂರೈಸಿದ ಬಳಿಕ ಸಚಿವರು ಸುಬ್ರಹ್ಮಣ್ಯ ಕ್ಷೇತ್ರಕ್ಕೆ ತೆರಳಿದರು.