ಉಡುಪಿ: ಕೇಂದ್ರ ಸರ್ಕಾರದ ಹಲವು ನೀತಿಗಳನ್ನು ವಿರೋಧಿಸಿ ದೇಶದ ಕಾರ್ಮಿಕ ಸಂಘಟನೆಗಳು ಇಂದು ಬಂದ್‌ಗೆ ಕರೆ ನೀಡಿವೆ.ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಕೈಬಿಡಬೇಕು, ಗುತ್ತಿಗೆ ಪದ್ಧತಿ ಕೊನೆಗೊಳಿಸಬೇಕು, ಸರ್ಕಾರಿ ಸ್ವಾಮ್ಯದ ಕಂಪನಿಗಳನ್ನು ಖಾಸಗಿಯವರಿಗೆ ಮಾರಾಟ ಮಾಡುವುದನ್ನು ನಿಲ್ಲಿಸಬೇಕು ಹಾಗೂ ಕನಿಷ್ಠ ವೇತನವನ್ನು 26 ಸಾವಿರಕ್ಕೆ ಹೆಚ್ಚಿಸಬೇಕು ಎಂಬ ಬೇಡಿಕೆಯನ್ನು ಸಿಐಟಿಯು, ಐಎನ್‌ಟಿಯುಸಿ ಮತ್ತು ಎಐಟಿಯುಸಿ ಸಂಘಟನೆಗಳು ಸರ್ಕಾರದ ಮುಂದಿರಿಸಿವೆ. ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಕೂಡ ಬಂದ್‌ಗೆ ಬೆಂಬಲ ಸೂಚಿಸಿದೆ.ಈ ಹಿನ್ನೆಲೆಯಲ್ಲಿ ಉಡುಪಿಯಲ್ಲೂ ಪ್ರತಿಭಟನೆ ನಡೆಯಿತು.
ಸಿಐಟಿಯು ಕಛೇರಿಯಿಂದ ಪ್ರಧಾನ ಅಂಚೆ ಕಚೇರಿವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಕಾರರು ಪ್ರಧಾನ ಅಂಚೆ ಕಚೇರಿ ಮುಂದೆ ಜಮಾಯಿಸಿದರು.ಮುಷ್ಕರದಲ್ಲಿ ಭಾಗಿಯಾದ ನೂರಾರು ಕಾರ್ಮಿಕರು ,ನೌಕರರು ಕೇಂದ್ರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಆಕ್ರೋಶ ಹೊರಹಾಕಿದರು.ಉಳಿದಂತೆ ಅಂಗಡಿ ಮುಂಗಟ್ಟುಗಳು ಎಂದಿನಂತೆ ತೆರೆದಿದ್ದು ಜನಜೀವನ ಸಹಜ ಸ್ಥಿತಿಯಲ್ಲಿತ್ತು.
