
ಬೆಂಗಳೂರು: ರೌಡಿಶೀಟರ್ ಹತ್ಯೆ ಪ್ರಕರಣ- ಬಿಜೆಪಿ ಶಾಸಕ ಬೈರತಿ ಬಸವರಾಜ್ ಸಹಿತ ಐವರ ವಿರುದ್ಧ ಎಫ್‌ಐಆರ್
16/07/2025 09:15 AM
ಬೆಂಗಳೂರು: ಹಲಸೂರು ಕೆರೆಯ ಬಳಿ ಮಂಗಳವಾರ ರಾತ್ರಿ ನಡೆದ ರೌಡಿಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಕು ಶಿವ(40) ಎಂಬಾತನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಕೆ.ಆರ್. ಪುರ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜ್ ಸಹಿತ ಐವರ ವಿರುದ್ಧ ಭಾರತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಜಗದೀಶ್, ಕಿರಣ್, ವಿಮಲ್, ಅನಿಲ್ ಎಂಬವರ ವಿರುದ್ಧವೂ ಕೊಲೆಯಾದ ಶಿವಪ್ರಕಾಶ್ ತಾಯಿ ನೀಡಿರುವ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಜಮೀನು ವಿವಾದಕ್ಕೆ ಸಂಬಂಧಿಸಿ ಈ ಕೊಲೆ ನಡೆದಿದೆ ಎಂದು ಶಿವಪ್ರಕಾಶ್ ತಾಯಿ ಪೊಲೀಸ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.ಎಫ್ ಐಆರ್ ನಲ್ಲಿ ಬೈರತಿ ಬಸವರಾಜ್ ಅವರನ್ನು 5ನೇ ಆರೋಪಿಯಾಗಿ ಹೆಸರಿಸಲಾಗಿದೆ.
ಶಿವಪ್ರಕಾಶ್ ಅಲಿಯಾಸ್ ಬಿಕ್ಕು ಶಿವನನ್ನು ಮಂಗಳವಾರ ರಾತ್ರಿ ಹಲಸೂರು ಕೆರೆಯ ಸಮೀಪದ ಆತನ ಮನೆಯೆದುರು ದುಷ್ಕರ್ಮಿಗಳು ಕೊಲೆ ಮಾಡಿದ್ದರು. ಕಾರಿನಲ್ಲಿ ಬಂದ 4-5 ಮಂದಿಯಿದ್ದ ದುಷ್ಕರ್ಮಿಗಳು ಶಿವಪ್ರಕಾಶ್ ನನ್ನು ಮಾರಕಾಯುಧಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.