
ಉಡುಪಿ: ರಾಜದ್ರೋಹ ಎಸಗಿರುವ ಶಾಸಕ ಸುನೀಲ್ ಕುಮಾರ್ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ- ಕಾರ್ಕಳ ಕಾಂಗ್ರೆಸ್
ಉಡುಪಿ: ಕಾರ್ಕಳ ಶಾಸಕ ಸುನೀಲ್ ಕುಮಾರ್ ಅವರ ಮಾರ್ಗದರ್ಶನದಲ್ಲಿ 2023 ರ ವಿಧಾನಾಸಭಾ ಚುನಾವಣೆಯಲ್ಲಿ ಗೆಲ್ಲುವುದಕ್ಕಾಗಿ ನಡೆದ ಒಂದು ವ್ಯವಸ್ಥಿತವಾದ ಪೂರ್ವಯೋಜಿತವಾದ ವಂಚನೆ, ಪರಶುರಾಮ ಕಂಚಿನ ಪ್ರತಿಮೆ ನಿರ್ಮಾಣ ಮಾಡಿದ್ದೇನೆಂದು ಕಳೆದ ಎರಡು ವರ್ಷಗಳಿಂದ ನಿರಂತರ ಸುಳ್ಳು ಹೇಳಿ ಜನತೆಗೆ ಎಸಗಿದ ಧಾರ್ಮಿಕ ನಂಬಿಕೆ ದ್ರೋಹ ಮತ್ತು ಎಲ್ಲಕ್ಕಿಂತಲೂ ಮಿಗಿಲಾಗಿ ರಾಜ್ಯದ ಅಂದಿನ ಮುಖ್ಯಮಂತ್ರಿಯಾಗಿದ್ದ ಬೊಮ್ಮಯಿಯವರನ್ನು ಮತ್ತು ತನ್ನ ಸಚಿವ ಸಂಪುಟದ ಸಚಿವರನ್ನು ಕರೆಸಿ ಅವರಿಂದ ನಕಲಿ ಪ್ರತಿಮೆಯನ್ನು ಉದ್ಘಾಟಿಸಿ ತನ್ನದೇ ಸರಕಾರಕ್ಕೆ ದ್ರೋಹ ಎಸಗಿದ ರಾಜದ್ರೋಹ" ಪ್ರಕರಣವೂ ಆಗಿದೆ. ಆದ್ದರಿಂದ ಶಾಸಕರು ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಬೇಕು ಎಂದು ಕಾರ್ಕಳ ಕಾಂಗ್ರೆಸ್ ಆಗ್ರಹಿಸಿದೆ.
ಕಾಂಗ್ರೆಸಿಗರು ಪೈಬರ್ ಪ್ರತಿಮೆ ಎಂದು ನಮ್ಮ ಮೇಲೆ ಮಾಡಿರುವ ಆರೋಪದಲ್ಲಿ ಹುರುಳಿಲ್ಲ, ಕಾಂಗ್ರೆಸ್ ಆರೋಪ ನಿರಾಧಾರ, ನಾವು ಇದರಲ್ಲಿ ಗೆದ್ದಿದ್ದೇವೆ ಎನ್ನುವ ಮೂರ್ಖತನದ ಮಾತುಗಳನ್ನು ಅವರು ಈಗ ಹೇಳಿಕೊಳ್ಳುತ್ತಿದ್ದಾರೆ. ಆದರೆ ವಾಸ್ತವ ಏನೆಂದರೆ ಇಲ್ಲಿ ಮುಖ್ಯವಾದ ಆರೋಪ ಮತ್ತು ದೂರು ದಾಖಲಾಗಿರುವುದು ಪ್ರತಿಮೆಯನ್ನು ಕಂಚಿನಿಂದ ಮಾಡಿದ್ದಾರೆಯೇ ಅಥವಾ ಇಲ್ಲವೇ ಎನ್ನುವ ಬಗ್ಗೆಯಲ್ಲವೇ?
ಮಾಡಿದ ಆರೋಪಕ್ಕೆ ನಾವು ಬದ್ದ ನೀವು ಸವಾಲನ್ನು ಸ್ವೀಕರಿಸುವಿರೇ? ಉಮಿಕಲ್ ಬೆಟ್ಟದ ಮೇಲೆ ನಾವು ಭೇಟಿ ನೀಡಿದಾಗ ಪ್ರತಿಮೆಯ ಸೊಂಟದ ಕೆಳಗಿನ ಭಾಗದ ಸುತ್ತಲೂ ಗ್ಲಾಸ್ ಪೈಬರ್ ಲೇಪಿತ ಅಂಶಗಳು ಕಂಡುಬಂದಿತ್ತು ಮತ್ತು ಸುತ್ತಲೂ ಅದರ ತುಂಡುಗಳು ಬಿದ್ದುಕೊಂಡಿದ್ದವು. ಆ ಕಾರಣಕ್ಕಾಗಿ ನಾವು ಈ ಪ್ರತಿಮೆಯನ್ನು ಪೈಬರನ್ನೂ ಬಳಸಿ ಮಾಡಿರಬಹುದು ಎಂದು ಆರೋಪವನ್ನು ಮಾಡಿದೆವು. ಮತ್ತು ನಾವು ಅಂದು ಮಾಡಿದ ಆರೋಪಕ್ಕೆ ಈಗಲೂ ಬದ್ಧರಾಗಿದ್ದೇವೆ. ಬೆಟ್ಟದ ಮೇಲೆ ಅರ್ಧ ಭಾಗ ಪೈಬರ್ ನಿಂದಲೇ ಲೇಪಿತವಾಗಿದೆ.ಅದನ್ನು ಯಾರು ಬೇಕಿದ್ದರೂ ಹೋಗಿ ಪರೀಕ್ಷೆ ಮಾಡಬಹುದು. ಆದರೆ ಪ್ರತಿಮೆಯಲ್ಲಿ ಕಂಚನ್ನು ತೋರಿಸಲು ನಿಮ್ಮಿಂದ ಸಾದ್ಯವೇ ಎನ್ನುವ ಸವಾಲು ಹಾಕುತ್ತೇವೆ. ಪರಶುರಾಮನ ಕಂಚಿನ ಪ್ರತಿಮೆ ನಿರ್ಮಾಣ ಮಾಡಲಾಗಿಲ್ಲ ಎನ್ನುವ ನಮ್ಮ ಆರೋಪ ಇಂದು ಸತ್ಯವಾಗಿದೆ, ಇದು ನಮ್ಮ ಹೋರಾಟಕ್ಕೆ ಸಿಕ್ಕ ಜಯವಾಗಿದೆ.
ಎರಡೆರಡು ಪ್ರತಿಮೆಯ ಉದ್ದೇಶ ಏನು? ಪ್ರತಿಮೆಯ ಶಿಲ್ಪಿಯ ಬೆಂಗಳೂರಿನ ಗೋಡಾನಿನಿಂದ ಪೋಲಿಸರು ವಶಕ್ಕೆ ಪಡೆದ ಪ್ರತಿಮೆಯ ಭಾಗ ಹಿತ್ತಾಳ ಆಗಿದೆಯೆಂದು FSIL ತನಿಖೆಯಿಂದ ಸಾಬೀತಾಗಿದೆ ಅದರಲ್ಲಿ ಪ್ರತಿಮೆಯ ಮುಖ, ಎದೆ, ಎರಡು ಕಾಲುಗಳು ಮತ್ತು ಪಾದ ಭಾಗಗಳು ಬೇರೆ ಬೇರೆಯಾಗಿಯೇ ಇವೆ.ಹಾಗಾದರೆ ಬೆಟ್ಟದ ಮೇಲಿರುವ ಭಾಗ ಯಾವುದು? ಬೆಟ್ಟದ ಮೇಲೆಯೂ ಪ್ರತಿಮೆಯ ಸೊಂಟದ ಕೆಳಗಿನ ಎಲ್ಲಾ ಭಾಗಗಳು ಇದ್ದು ಎರಡು ಪ್ರತಿಮೆ ನಿರ್ಮಾಣ ಯಾಕಾಗಿ ಮಾಡಲಾಯಿತು ಎನ್ನುವ ಇಂದಿನ ಪ್ರಶ್ನೆಗೆ ಶಾಸಕರು ಉತ್ತರಿಸಬೇಕಾಗುತ್ತದೆ ಎಂದು ಕಾರ್ಕಳ ಕಾಂಗ್ರೆಸ್ ಮುಖಂಡ ಶುಭದ ರಾವ್ ಒತ್ತಾಯ ಮಾಡಿದ್ದಾರೆ.