ವಾಷಿಂಗ್ಟನ್: ಟ್ರಂಪ್ ನೊಬೆಲ್ ಶಾಂತಿ ಪ್ರಶಸ್ತಿಗೆ ಅರ್ಹ- ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು




ವಾಷಿಂಗ್ಟನ್: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದ್ದಾಗಿ ವರದಿಯಾಗಿದೆ. ನೆತನ್ಯಾಹು ಟ್ರಂಪ್ ಅವರನ್ನು ಅರ್ಹ ಎಂದು ಕರೆದಿದ್ದಾರೆ. ನೊಬೆಲ್ ಪ್ರಶಸ್ತಿ ಸಮಿತಿಗೆ ಕಳುಹಿಸಿದ ಪತ್ರವನ್ನು ಟ್ರಂಪ್‌ಗೆ ಹಸ್ತಾಂತರಿಸಿದ ಇಸ್ರೇಲಿ ಪ್ರಧಾನಿ, "ನೀವು ಅದನ್ನು ಪಡೆಯಬೇಕು" ಎಂದು ಹೇಳಿದರು.

ಅಧ್ಯಕ್ಷರೇ, ನಾನು ನೊಬೆಲ್ ಪ್ರಶಸ್ತಿ ಸಮಿತಿಗೆ ಕಳುಹಿಸಿದ ಪತ್ರವನ್ನು ನಿಮ್ಮ ಮುಂದೆ ಪ್ರಸ್ತುತಪಡಿಸಲು ಬಯಸುತ್ತೇನೆ. ಇದು ನಿಮ್ಮನ್ನು ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡುತ್ತಿದೆ, ಅದು ಅರ್ಹವಾಗಿದೆ, ಮತ್ತು ನೀವು ಅದನ್ನು ಪಡೆಯಬೇಕು" ಎಂದು ಅವರು ಹೇಳಿದ್ದಾರೆ. ಉಭಯ ನಾಯಕರ ಭೇಟಿಯ ಸಮಯದಲ್ಲಿ, ಗಾಜಾ ಯುದ್ಧವನ್ನು ಕೊನೆಗೊಳಿಸುವಂತೆ ಟ್ರಂಪ್ ನೆತನ್ಯಾಹು ಅವರನ್ನು ಒತ್ತಾಯಿಸುವ ಸಾಧ್ಯತೆಯಿದೆ. ಇಸ್ರೇಲ್ ಮತ್ತು ಹಮಾಸ್ ಕದನ ವಿರಾಮದ ಕುರಿತು ಕತಾರ್‌ನಲ್ಲಿ ಪರೋಕ್ಷ ಮಾತುಕತೆ ನಡೆಸಿದ ನಂತರ ಈ ಬೆಳವಣಿಗೆ ನಡೆದಿದೆ.

ಇತ್ತ ಇರಾನ್ ಹಾಗೂ ಇಸ್ರೇಲ್ ನಡುವೆ ಕದನ ವಿರಾಮ ಏರ್ಪಟ್ಟಿದೆ. ನಿಯಮವನ್ನು ಉಲ್ಲಂಘಿಸಿ ಪರಮಾಣು ನೆಲೆಗಳ ಸ್ಥಾಪನೆಗೆ ಮತ್ತೆ ಮುಂದಾದರೆ ಇರಾನ್ ಮೇಲೆ ಮತ್ತೆ ದಾಳಿ ನಡೆಸಲು ಟ್ರಂಪ್ ಇಸ್ರೇಲ್‌ಗೆ ಅನುಮತಿ ನೀಡಬಹುದು ಎಂದು ವರದಿಗಳು ತಿಳಿಸಿವೆ. ಜೂನ್ 24 ರಂದು ಟ್ರಂಪ್ ಮಧ್ಯಸ್ಥಿಕೆಯ ಕದನ ವಿರಾಮಕ್ಕೆ ಸಹಿ ಹಾಕಲಾಗಿದ್ದರೂ, ಇರಾನ್ ತನ್ನ ಪರಮಾಣು ಕಾರ್ಯಕ್ರಮವನ್ನು ಮತ್ತೆ ಸ್ಥಾಪಿಸಲು ಪ್ರಯತ್ನಿಸಿದರೆ ಮತ್ತಷ್ಟು ಮಿಲಿಟರಿ ದಾಳಿಗಳ ಸಾಧ್ಯತೆಗೆ ಇಸ್ರೇಲ್ ಸಿದ್ಧತೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.