ಹೆಬ್ರಿ: ಮರಳು ,ಕೆಂಪು ಕಲ್ಲು ಸಮಸ್ಯೆಯಿಂದ ಕರಾವಳಿ ಆರ್ಥಿಕತೆಗೆ ಪೆಟ್ಟು- ಸರಕಾರ ಶೀಘ್ರ ಸಮಸ್ಯೆ ಬಗೆಹರಿಸಲಿ ಪವನ್ ಕುಮಾರ್ ಶಿರ್ವ ಒತ್ತಾಯ

 


ಹೆಬ್ರಿ: ಪ್ರಸ್ತುತ ಪರಿಸ್ಥಿತಿಯಲ್ಲಿ ಕರಾವಳಿ ಜಿಲ್ಲೆಗಳಲ್ಲಿ ನಿರ್ಮಾಣ ಕ್ಷೇತ್ರ ಕುಂಟುತ್ತಾ ಸಾಗುತ್ತಿದೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳು,ಕೆಂಪು ಕಲ್ಲು ,ಪಾದೆ ಕಲ್ಲು ಸಮಸ್ಯೆ ತೀವ್ರಗೊಂಡಿದೆ. ಇದರಿಂದಾಗಿ ಕಟ್ಟಡ ನಿರ್ಮಾಣ ಕ್ಷೇತ್ರವನ್ನೇ ನಂಬಿದ ಜನರು ಕಂಗಾಲಾಗಿದ್ದಾರೆ. ಕೂಲಿ ಕಾರ್ಮಿಕರ ಸಮಸ್ಯೆ ಒಂದೆಡೆಯಾದರೆ ಕಟ್ಟಡ ನಿರ್ಮಾಣ ಕ್ಷೇತ್ರದ ಮಾಲಕರುಗಳು ಇದರಿಂದ ಸಂಕಷ್ಟಕ್ಕೆ ಈಡಾಗಿದ್ದಾರೆ. ಕರಾವಳಿಯ ಪ್ರಮುಖ ಆರ್ಥಿಕತೆ ಮೂಲವಾಗಿರುವ ರಿಯಲ್ ಎಸ್ಟೇಟ್ ಉದ್ಯಮ ಕೂಡ ಕುಂಟುತ್ತ ಸಾಗುತ್ತಿದೆ.ಈ ಸಂಬಂಧ ಈಗಾಗಲೇ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಮಂತ್ರಿ ದಿನೇಶ್ ಗುಂಡೂರಾವ್ ಅವರು ಹಲವು ಸುತ್ತಿನ ಸಭೆ ನಡೆಸಿದ್ದು ಶೀಘ್ರ ಸಮಸ್ಯೆ ಬಗೆಹರಿಸುವ ಭರವಸೆಯನ್ನು ನೀಡಿದ್ದಾರೆ. ಸರಕಾರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಈ ಮೂಲಕ ಕರಾವಳಿ ಜಿಲ್ಲೆಗಳ ಅಭಿವೃದ್ಧಿಗೆ ಪೂರಕವಾದಂತಹ ತೀರ್ಮಾನವನ್ನು ಶೀಘ್ರ ತೆಗೆದುಕೊಳ್ಳಬೇಕು ಎಂದು ಸಮಾಜಸೇವಕ ,ಉದ್ಯಮಿ ಪವನ್ ಕುಮಾರ್ ಶಿರ್ವ ಸರಕಾರವನ್ನು ಒತ್ತಾಯ ಮಾಡಿದ್ದಾರೆ.