ಹೃದಯದ ಆರೋಗ್ಯದ ಬಗ್ಗೆ ಕಳೆದ ಸಂಚಿಕೆಯಲ್ಲಿ ಬರೆದಿದ್ದೆ.
ಮನೋವೈದ್ಯನಾಗಿ ನನ್ನ ಅನಿಸಿಕೆ ಎಂದರೆ ಸಾರ್ವಜನಿಕರು ಯೋಚಿಸಬೇಕಾದ ಕೆಲವು ವಿಷಯಗಳನ್ನು ಬರೆಯಲು ಪ್ರಯತ್ನಿಸಿದ್ದೇನೆ.ನಾವೆಲ್ಲ ಮನೆ ಅಡುಗೆಗೆ ಮರಳಿ ಹೋಗಬೇಕಾಗಿದೆ. ಹೋಟೆಲ್ ಗಳಲ್ಲಿ ಊಟ ಮಾಡುವುದು, ಆಪ್ ಮೂಲಕ ಊಟ ತರಿಸಿ ತಿನ್ನುವುದು ನಿಯಂತ್ರಿಸಬೇಕಾಗಿದೆ.
ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿ ಬಿಪಿ, ಶುಗರ್, ಕೊಲೆಸ್ಟ್ರಾಲ್, ತೂಕ ಇದರ ಬಗ್ಗೆ ಗಮನ ಹರಿಸುವುದು. ಮಾನಸಿಕ ಒತ್ತಡವನ್ನು ನಿರ್ಲಕ್ಷಿಸಬೇಡಿ. ಅಗತ್ಯವಿದ್ದರೆ ಮನೋವೈದ್ಯರ ಸಲಹೆ ಪಡೆಯಿರಿ. ನಿಮ್ಮ ಮಾನಸಿಕ ಆರೋಗ್ಯಕ್ಕಾಗಿ ಟಿವಿ ಚಾನೆಲ್ ಗಳು ಮತ್ತು ಸಾಮಾಜಿಕ ಜಾಲತಾಣಗಳನ್ನು ನಂಬುವುದನ್ನು ಕಡಿಮೆ ಮಾಡಿ, ನಿಮ್ಮ ವೈದ್ಯರುಗಳ ಮೇಲೆ ನಂಬಿಕೆ ಇಟ್ಟುಕೊಳ್ಳಿ.
ಪ್ರತಿದಿನ ವ್ಯಾಯಾಮ ಸಣ್ಣದಾಗಿ ಆರಂಭಿಸಿ, ಭಾರಿ ವ್ಯಾಯಾಮ ತಪ್ಪಿಸಿ. ವಿಷಕಾರಿ ಪದಾರ್ಥಗಳು ಮದ್ಯ ,ತಂಬಾಕು ಕಡಿಮೆ ಮಾಡಿ ,ಸಂಪೂರ್ಣವಾಗಿ ನಿಲ್ಲಿಸಿ.ಮನೋವೈದ್ಯನಾಗಿ ನನ್ನ ಅನಿಸಿಕೆ ಎಂದರೆ ಹಠಾತ್ ಸಾವು ತಕ್ಷಣವಾಗುವುದಲ್ಲ. ನಾವೆಲ್ಲರೂ ಅನುಸರಿಸುತ್ತಿರುವ ದಿವ್ಯ ನಿರ್ಲಕ್ಷಗಳು, ಅಧಿಕ ಒತ್ತಡ ಇದರ ಫಲ.
ಕರ್ನಾಟಕ ಸರ್ಕಾರದ ದಿಢೀರ್ ಸಾವುಗಳನ್ನು ನೋಟಿಫೈಯೇಬಲ್ ಮಾಡುವ ಧೈರ್ಯವಂತ ನಿರ್ಧಾರವು ಭಾರತದ ಎಲ್ಲೆಡೆ ಮೂಡಲಿ. ನಮ್ಮ ಆರೋಗ್ಯ ನಮ್ಮೆಲ್ಲರ ಜವಾಬ್ದಾರಿ.
ಸರ್ಕಾರದ ಈ ಕೆಳಗಿನ ಹೊಸ ಕ್ರಮಗಳು ಕೂಡ ಸ್ವಾಗತಾರ್ಹ.
ಹೃದಯ ಆರೋಗ್ಯ ತಪಾಸಣೆ ಶಾಲಾ ವಿದ್ಯಾರ್ಥಿಗಳಿಗೆ (10ನೇ ತರಗತಿ/15 ವರ್ಷ ವಯಸ್ಸು) ಆರಂಭ.
ಸರ್ಕಾರಿ ನೌಕರರಿಗೆ ವಾರ್ಷಿಕ ಆರೋಗ್ಯ ತಪಾಸಣೆ.
ಖಾಸಗಿ ಸಂಸ್ಥೆಗಳಿಗೆ ಸಹ ತಪಾಸಣೆ ಮಾಡಲು ಶಿಫಾರಸು.
ಪಠ್ಯ ಪುಸ್ತಕಗಳಲ್ಲಿ ಹೃದಯ ಆರೋಗ್ಯ ಮತ್ತು ಹಠಾತ್ ಸಾವುಗಳ ಕುರಿತು ಅಧ್ಯಾಯ ಸೇರಿಸುವುದು.
CPR ತರಬೇತಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ AED ಯಂತ್ರಗಳ ವ್ಯವಸ್ಥೆ.
ಹೃದಯ ಆರೋಗ್ಯ ಜಾಗೃತಿ ಮತ್ತು ಆರೋಗ್ಯಕರ ಜೀವನಶೈಲಿ ಬಗ್ಗೆ ಶಿಕ್ಷಣ....ಇವೆಲ್ಲವನ್ನೂ ವ್ಯವಸ್ಥಿತವಾಗಿ ಮಾಡಿದರೆ ಜನರಲ್ಲಿ ಹೆದರಿಕೆ ಕಡಿಮೆ ಆಗಬಹುದು.
ಇನ್ನು ದಿನನಿತ್ಯದ ಜೀವನದಲ್ಲಿ stoicism ಸಂದೇಶವೊಂದನ್ನು ನೆನಪಿಸುತ್ತೇನೆ."ನಾನು ಬದಲಾಯಿಸಬಹುದಾದ ವಿಷಯಗಳ ಮೇಲೆ ಗಮನಹರಿಸುತ್ತೇನೆ. ಉಳಿದವುಗಳನ್ನು ಶಾಂತ ಮನಸ್ಸಿನಿಂದ ಒಪ್ಪಿಕೊಳ್ಳುತ್ತೇನೆ."
"ನನ್ನ ಪ್ರತಿಕ್ರಿಯೆ, ಆಲೋಚನೆ, ಮತ್ತು ನಿರ್ಧಾರಗಳು ನನ್ನ ಕೈಯಲ್ಲಿವೆ. ಹೊರಗಿನ ಘಟನೆಗಳು ನನ್ನ ನಿಯಂತ್ರಣಕ್ಕೆ ಹೊರಗಿನವು."
"ಜೀವನದಲ್ಲಿ ಏನೇ ಆಗಲಿ, ಧೈರ್ಯ, ಸಮಾಧಾನ ಮತ್ತು ಜವಾಬ್ದಾರಿಯುತ ನಡೆ ನನ್ನ ಆದರ್ಶ.” ಅಂದರೆ ನಿಮ್ಮ ಕೈಯಲ್ಲಿರುವುದನ್ನು ಬದಲಾಯಿಸಿ:ಆರೋಗ್ಯಕರ ಆಹಾರ, ವ್ಯಾಯಾಮ, ಒತ್ತಡ ನಿಯಂತ್ರಣ, ಉತ್ತಮ ಅಭ್ಯಾಸಗಳು.
ಜೀವನದಲ್ಲಿ ಏನೇ ಆಗಲಿ, ಆತಂಕಗೊಳ್ಳದೆ, ಶಾಂತ ಮನಸ್ಸಿನಿಂದ ಸ್ವೀಕರಿಸಿ.
