ಉಡುಪಿ: ಅಗ್ರಹಾರ ನಾರಾಯಣ ತಂತ್ರಿಗಳು ಸಂಸ್ಥೆಯೊಂದು ಮಾಡಬೇಕಾದ ಕೆಲಸವನ್ನು ಮಾಡಿದ್ದಾರೆ-  ಕೃಷ್ಣಾಪುರಶ್ರೀ

ಉಡುಪಿ: ಅಗ್ರಹಾರ ನಾರಾಯಣ ತಂತ್ರಿಗಳು ಸಂಸ್ಥೆಯೊಂದು ಮಾಡಬೇಕಾದ ಕೆಲಸವನ್ನು ಮಾಡಿದ್ದಾರೆ- ಕೃಷ್ಣಾಪುರಶ್ರೀ

 

ಉಡುಪಿ: ಜ್ಞಾನಿಗಳಿಗೆ ಪರಮಾತ್ಮ, ಪರಮಾತ್ಮನಿಗೆ ಜ್ಞಾನಿಗಳು ಪ್ರಿಯರಾಗಿದ್ದು ಜ್ಞಾನಿಗಳ ಗೌರವ ದೇವರಿಗೂ ಸಲ್ಲುತ್ತದೆ ಎಂದು ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಹೇಳಿದ್ದಾರೆ.

ಅವರು ಬೆಂಗಳೂರಿನ ಅಗ್ರಹಾರ ನಾರಾಯಣ ತಂತ್ರಿ ಟ್ರಸ್ಟ್ ವತಿಯಿಂದ ಉಡುಪಿ ರಥಬೀದಿಯ ಶ್ರೀಕೃಷ್ಣ ಸಭಾ ಮಂದಿರದಲ್ಲಿ ಅಗ್ರಹಾರ ನಾರಾಯಣ ತಂತ್ರಿಗಳ ಸುವರ್ಣ ಸಂಸ್ಮರಣೆ ಕಾರ್ಯಕ್ರಮದಲ್ಲಿ ಶನಿವಾರ ಆಶೀರ್ವಚನ ನೀಡಿದರು.

ನಿಯಮದಲ್ಲಿ ಬದುಕಿದ ಧರ್ಮಿಷ್ಠರಿಗೆ ಆಯ್ಕೆಗಳು ಕಡಿಮೆ, ಅಧರ್ಮಿಷ್ಠರಿಗೆ ಆಯ್ಕೆಗಳು ಬಹಳವಿರುತ್ತವೆ. ಆಚಾರ್ಯ ಎನಿಸಿಕೊಂಡವರು ಆಚಾರವಂತರಾಗಿರಬೇಕು. ಮಧ್ವ ಶಾಸ್ತ, ಗ್ರಂಥಗಳ ಅನುವಾದಕ್ಕೆ ತಮ್ಮ ಬದುಕು ಮೀಸಲಿಟ್ಟ ಅಗ್ರಹಾರ ನಾರಾಯಣ ತಂತ್ರಿಗಳು ಸಂಸ್ಥೆಯೊಂದು ಮಾಡಬೇಕಾದ ಕೆಲಸವನ್ನು ಏಕಾಂಗಿಯಾಗಿ ಮಾಡಿದ್ದಾರೆ ಎಂದು ಶ್ರೀಗಳು ನುಡಿದರು.

ಎ.ರಘುಪತಿ ತಂತ್ರಿ ರಚಿತ ಭಾಗವತ ಸಾರ ಹಾಗೂ  ಜ್ಞಾನ ಮತ್ತು ಭಕ್ತಿ ಯೋಗ ಕೃತಿಯನ್ನು ಈ ಸಂದರ್ಭ ಬಿಡುಗಡೆ ಮಾಡಲಾಯಿತು.

ಬೆಂಗಳೂರು ಪೂರ್ಣಪ್ರಜ್ಞ ಸಂಶೋಧನಾಲಯದ ನಿವೃತ್ತ ನಿರ್ದೇಶಕ ಡಾ. ಎ.ವಿ. ನಾಗತೀರ್ಥಾಚಾರ್ಯ ನಾಗಸಂಪಿಗೆ,  ಬೆಂಗಳೂರಿನ ವಿದ್ವಾಂಸ ರಾಮವಿಠಲಾಚಾರ್ಯ, ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠದ ಪ್ರಿನ್ಸಿಪಾಲ್ ವಿದ್ವಾನ್ ಡಾ. ಎಚ್. ಸತ್ಯನಾರಾಯಣಾಚಾರ್ಯ, ಬೆಂಗಳೂರು ಸಂಸ್ಕೃತ ಕಾಲೇಜು ಉಪನ್ಯಾಸಕ ವಿದ್ವಾನ್ ಡಾ. ಕೆ. ರಾಜಗೋಪಾಲಾಚಾರ್ಯ ಸನ್ಮಾನ ಸ್ವೀಕರಿಸಿದರು.

ಪ್ರಹ್ಲಾದ ಬಾಯರಿ, ನಿರಂಜನ ಆಚಾರ್ಯ, ನಾಗರಾಜ ತಂತ್ರಿ, ವಿಷ್ಣುಮೂರ್ತಿ  ತಂತ್ರಿ ಸನ್ಮಾನಿತರನ್ನು ಪರಿಚಯಿಸಿದರು. ವೀಣಾ ತಂತ್ರಿ ಅಗ್ರಹಾರ ನಾರಾಯಣ ತಂತ್ರಿ ಟ್ರಸ್ಟ್ ಮೂಲಕ ನಿರಂತರ ಕೆಲಸದ ಭರವಸೆಯಿತ್ತರು.  ಸಂಸ್ಕೃತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು.

ಪೂರ್ಣಪ್ರಜ್ಞ ತಂತ್ರಿ ವೇದಘೋಷ ಮಾಡಿದರು. ಬಾಲರಾಜ್ ತಂತ್ರಿ ಸ್ವಾಗತಿಸಿದರು. ಹೆರ್ಗ ಹರಿದಾಸ್ ಭಟ್ ಕಾರ್ಯಕ್ರಮ ನಿರೂಪಿಸಿದರು. ಅಗ್ರಹಾರ ರಘುಪತಿ ತಂತ್ರಿ ಪ್ರಾಸ್ತಾವಿಕ ಮಾತನಾಡಿದರು.

Ads on article

Advertise in articles 1

advertising articles 2

Advertise under the article