ನವದೆಹಲಿ: ಉಪರಾಷ್ಟ್ರಪತಿ ಹುದ್ದೆಗೆ ಜಗಧೀಪ್ ಧನಕರ್ ದಿಢೀರ್ ರಾಜೀನಾಮೆ

ನವದೆಹಲಿ: ಉಪರಾಷ್ಟ್ರಪತಿ ಹುದ್ದೆಗೆ ಜಗಧೀಪ್ ಧನಕರ್ ದಿಢೀರ್ ರಾಜೀನಾಮೆ

 

ನವದೆಹಲಿ: ದಿಢೀರ್‌ ಬೆಳವಣಿಗೆಯಲ್ಲಿ ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ (74) ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. "ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು, ವೈದ್ಯಕೀಯ ಸಲಹೆಯನ್ನು ಪಾಲಿಸಲು, ಸಂವಿಧಾನದ 67(ಎ) ವಿಧಿಯಂತೆ ತಕ್ಷಣದಿಂದ ಜಾರಿಗೆ ಬರುವಂತೆ ಉಪರಾಷ್ಟ್ರಪತಿ ಹುದ್ದೆಯನ್ನು ತೊರೆಯುತ್ತಿದ್ದೇನೆ’ ಎಂದು ಅವರು ಬರೆದಿದ್ದಾರೆ.

ಮುಂಗಾರು ಅಧಿವೇಶನದ ಮೊದಲ ದಿನವಾದ ಸೋಮವಾರ ರಾಜ್ಯಸಭೆಯ ಕಲಾಪಗಳಿಗೆ ಹಾಜರಾಗಿದ್ದ ಧನಕರ್‌, ಸಂಜೆಯ ವೇಳೆ ವೈದ್ಯಕೀಯ ಕಾರಣ ನೀಡಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. 2027ರವರೆಗೂ ಧನಕರ್‌ ಅವರ ಉಪರಾಷ್ಟ್ರಪತಿ ಹುದ್ದೆಯ ಅವಧಿ ಇದ್ದು ಅದಕ್ಕೂ ಎರಡು ವರ್ಷ ಮೊದಲೇ ಅವರು ಹುದ್ದೆ ತೊರೆದಿದ್ದಾರೆ. ಇತ್ತೀಚೆಗಷ್ಟೇ ಧನಕರ್‌ ದೆಹಲಿ ಏಮ್ಸ್‌ನಲ್ಲಿ ಹೃದಯದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

2022ರಲ್ಲಿ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದ ಧನಕರ್‌, ಅವಧಿ ಬಾಕಿ ಇದ್ದಾಗಲೇ ರಾಜೀನಾಮೆ ನೀಡಿದ 2ನೇ ವ್ಯಕ್ತಿ ಎನ್ನಿಸಿಕೊಂಡಿದ್ದಾರೆ. 1969ರಲ್ಲಿ ರಾಷ್ಟ್ರಪತಿ ಹುದ್ದೆಗೆ ಸ್ಪರ್ಧಿಸುವ ಉದ್ದೇಶದಿಂದ ವಿ.ವಿ. ಗಿರಿ ಅವರು ಉಪರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ ನೀಡಿದ್ದರು.

ರಾಷ್ಟ್ರಪತಿಗಳಿಗೆ ರಾಜೀನಾಮೆ ಪತ್ರ ನೀಡಿರುವ ಧನಕರ್‌, ತಾವು ಹುದ್ದೆಯಲ್ಲಿದ್ದಷ್ಟು ಸಮಯ ನಿರಂತರ ಬೆಂಬಲ ನೀಡಿ, ಅವಧಿಯುದ್ದಕ್ಕೂ ಒಳ್ಳೆಯ ಸಂಬಂಧ ಕಾಯ್ದುಕೊಂಡದ್ದಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಅಂತೆಯೇ, ಭಾರತ ಅಭಿವೃದ್ಧಿ ಹೊಂದುತ್ತಿದ್ದ ಸಮಯದಲ್ಲಿ ಅದರ ಭಾಗವಾಗಿದ್ದುದಕ್ಕೆ ಹೆಮ್ಮೆಯಿದೆ ಎಂದಿದ್ದಾರೆ.

ಧನಕರ್‌ ಅವರು 2022ರಲ್ಲಿ ಕಾಂಗ್ರೆಸ್‌ನ ಮಾರ್ಗರೇಟ್‌ ಆಳ್ವಾ ಅವರನ್ನು ಮಣಿಸಿ ಉಪರಾಷ್ಟ್ರಪತಿ ಹುದ್ದೆಗೆ ಆಯ್ಕೆಯಾಗಿದ್ದರು.

ಹೊಸ ಉಪರಾಷ್ಟ್ರಪತಿ ಆಯ್ಕೆಗೆ ರಾಜೀನಾಮೆಯ 60 ದಿನಗಳೊಳಗಾಗಿ ಚುನಾವಣೆ ನಡೆಯಲಿದೆ. ಇದರಲ್ಲಿ ಉಭಯ ಸದನದ ಎಲ್ಲಾ ಸಂಸದರು ಭಾಗಿಯಾಗಲಿದ್ದಾರೆ. ಅಲ್ಲಿಯವರೆಗೆ, ರಾಜ್ಯಸಭೆಯ ಉಪಸಭಾಪತಿಗಳು ಮೇಲ್ಮನೆಯ ಹಂಗಾಮಿ ಅಧ್ಯಕ್ಷರಾಗಿರಲಿದ್ದಾರೆ. ಅದರಂತೆ, ಧನಕರ್‌ ಅವರ ಜವಾಬ್ದಾರಿಯನ್ನು ತಾತ್ಕಾಲಿಕವಾಗಿ ಹರಿವಂಶ್ ನಾರಾಯಣ್ ಸಿಂಗ್ ವಹಿಸಿಕೊಳ್ಳಲಿದ್ದಾರೆ.

Ads on article

Advertise in articles 1

advertising articles 2

Advertise under the article