
ಹೆಬ್ರಿ: ವರ್ಕ್ ಪ್ರಮ್ ಹೋಂ ಉದ್ಯೋಗ ನೀಡುವುದಾಗಿ ನಂಬಿಸಿ 2 ಲಕ್ಷ ರೂ. ವಂಚನೆ
ಹೆಬ್ರಿ: ವರ್ಕ್ ಪ್ರಮ್ ಹೋಮ್ ಉದ್ಯೋಗ ನೀಡುವುದಾಗಿ ನಂಬಿಸಿ 2 ಲಕ್ಷ ರೂ. ವಂಚಿಸಿದ ಸೈಬರ್ ವಂಚಕನನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ. ಹೆಬ್ರಿ ತಾಲೂಕು ನಾಲ್ಕೂರು ಗ್ರಾಮದ ರಮೇಶ ನಾಯ್ಕ ಅವರು 2024ರ ಡಿಸೆಂಬರ್‌ನಲ್ಲಿ ಲೋಕಲ್ ಜಾಬ್ ಅಪ್ಲಿಕೇಶನ್ ಆ್ಯಪ್‌ನಲ್ಲಿ ಸನ್ ಶೈನ್ ಎಚ್ ಆರ್ ಸೊಲ್ಯೂಷನ್ ಎಂಬ ಹೆಸರಿನ ಕಂಪೆನಿ ನೀಡಿದ ಜಾಹೀರಾತು ನೋಡಿ ಡಾಟಾ ಎಂಟ್ರಿ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಆ ಕಂಪೆನಿಯ ಹೆಸರಿನಲ್ಲಿ ರಮೇಶರನ್ನು ವಿವಿಧ ಸಂಖ್ಯೆಗಳಿಂದ ಮತ್ತು ವಾಟ್ಸ್ ಆ್ಯಪ್ ಮುಖಾಂತರ ಸಂಪರ್ಕಿಸಿ ಬೇರೆ ಬೇರೆ ಆನ್‌ಲೈನ್ ಮೂಲಗಳಿಂದ 2,02,046 ರೂ. ಪಾವತಿಸಿಕೊಂಡು ವಂಚಿಸಲಾಗಿತ್ತು. ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಬೆಂಗಳೂರಿಗೆ ತೆರಳಿ ಆರೋಪಿ ಯಶವಂತಪುರದ ಶ್ರೀಧರ್ ವಿ. (27) ಎಂಬಾತನನ್ನು ವಶಕ್ಕೆ ಪಡೆದು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಕಾರ್ಕಳ ಉಪವಿಭಾಗದ ಎಎಸ್‌ಪಿ ಡಾ. ಹರ್ಷಾ ಪ್ರಿಯಂವದಾ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಮಂಜಪ್ಪ ಡಿ. ಆರ್. ನೇತೃತ್ವದಲ್ಲಿ ರಚಿಸಲಾದ ತನಿಖಾ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಆರೋಪಿಯಿಂದ 10 ಸಾವಿರ ರೂ. ಮೌಲ್ಯದ ಮೊಬೈಲ್, 3 ವಿವಿಧ ಬ್ಯಾಂಕಿನ ಎಟಿಎಂ. ಕಾರ್ಡ್ ಗಳು 1,74,960 ರೂ. ನಗದನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.