
ಧರ್ಮಸ್ಥಳ: ತಡರಾತ್ರಿ ಧರ್ಮಸ್ಥಳ ಪೊಲೀಸ್ ಠಾಣೆಗೆ ಎಸ್ ಐಟಿ ತಂಡ ಭೇಟಿ- ತನಿಖೆ ಚುರುಕು
ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿ ಜಿತೇಂದ್ರ ದಯಾಮ ಅವರು ಶುಕ್ರವಾರ ರಾತ್ರಿ ಧರ್ಮಸ್ಥಳ ಪೊಲೀಸ್ ಠಾಣೆಗೆ ಭೇಟಿ ನೀಡಿದರು.
ಮಂಗಳೂರಿಗೆ ಆಗಮಿಸಿದ್ದ ಅವರು ರಾತ್ರಿಯಾಗುತ್ತಲೇ ಪ್ರಕರಣದ ಕುರಿತಾದ ಮಾಹಿತಿ ಕಲೆಹಾಕುವ ಹಾಗೂ ಅದಕ್ಕೆ ಸಂಬಂಧಿಸಿದ ಪ್ರಕರಣಗಳ ಕಡತಗಳ ಪಡೆಯಲು ರಾತ್ರಿಯೇ ಧರ್ಮಸ್ಥಳ ಠಾಣೆಗೆ ಡೌಡಾಯಿಸಿದ್ದಾರೆ. ಠಾಣೆಯ ಎಸ್.ಐ. ಸಮರ್ಥ್ ಆರ್.ಗಾಣಿಗೇರ್ ಜತೆಗೆ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಬೆಳ್ತಂಗಡಿ ಪೊಲೀಸ್ ಠಾಣೆಯ ವಠಾರದಲ್ಲಿರುವ ನೂತನ ವಸತಿಗೃಹದ ಕಟ್ಟಡದ ಒಂದು ಪಾರ್ಶ್ವದಲ್ಲಿ ಎಸ್‌ಐಟಿ ಅಧಿಕಾರಿಗಳಿಗಾಗಿ ಕಚೇರಿ ಸಿದ್ಧಪಡಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಅವರು ಯಾವತ್ತಿನಿಂದ ಸ್ಥಳ ಪರಿಶೀಲಿಸಿ ತೆರಳಿ ತನಿಖೆ ಆರಂಭಿಸುತ್ತಾರೆ ಎಂಬ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಬೆಂಗಳೂರಿನಿಂದ ಡಿಐಜಿ ಎಂ.ಎನ್. ಅನುಚೇತ್ ಅವರ ನೇತೃತ್ವದ ತಂಡ ಸಂಜೆ 4 ಗಂಟೆಯ ಸುಮಾರಿಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿತು. ಅನಂತರ ನಗರದ ಪೊಲೀಸ್ ಅತಿಥಿಗೃಹಕ್ಕೆ ತೆರಳಿ ಎಸ್‌ಐಟಿಯ ಇತರ ಅಧಿಕಾರಿಗಳೊಂದಿಗೆ ಮೊದಲ ಹಂತದ ಸಭೆ ನಡೆಸಲಾಯಿತು.
ಪಶ್ಚಿಮ ವಲಯದ ಡಿಐಜಿ ಅಮಿತ್ ಸಿಂಗ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಎಸ್‌ಪಿ ಡಾ. ಅರುಣ್ ಕೆ. ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸ ಲಾಯಿತು. ಸಭೆ ನಡೆಸಿದ ಬಳಿಕ ಅಭಿಪ್ರಾಯ ಪಡೆಯಲು ಮಾಧ್ಯಮ ಗಳು ಮುಂದಾದಾಗ ಎಸ್‌ಐಟಿ ಅಧಿಕಾರಿಗಳು ಪ್ರತಿಕ್ರಿಯೆ ನೀಡಲಿಲ್ಲ. ಆಂತರಿಕ ಭದ್ರತೆ ವಿಭಾಗದ ಮಹಾನಿರ್ದೇಶಕ ಡಾ.ಪ್ರಣವ್ ಮೊಹಾಂತಿ ಅವರು ಎಸ್‌ಐಟಿ ಮುಖ್ಯಸ್ಥರಾಗಿದ್ದು, ಶೀಘ್ರವೇ ಅವರೂ ಜಿಲ್ಲೆಗೆ ಆಗಮಿಸಲಿದ್ದಾರೆ ಎಂದು ತಿಳಿದು ಬಂದಿದೆ.