ಬೆಂಗಳೂರು: ಕೇಂದ್ರ ಸರ್ಕಾರದ ಕಾರ್ಮಿಕ ಹಾಗೂ ರೈತ ನೀತಿಗಳನ್ನು ವಿರೋಧಿಸಿ ಬುಧವಾರ (ಜುಲೈ 9) ಭಾರತ ಬಂದ್‌ಗೆ ಕರೆ

 



ಬೆಂಗಳೂರು: ಕೇಂದ್ರ ಸರ್ಕಾರದ ಕಾರ್ಮಿಕ ಹಾಗೂ ರೈತ ನೀತಿಗಳನ್ನು ವಿರೋಧಿಸಿ 10 ಸೆಂಟ್ರಲ್ ಟ್ರೇಡ್ ಯೂನಿಯನ್‌ಗಳು ಬುಧವಾರ (ಜುಲೈ 9) ಭಾರತ ಬಂದ್‌ಗೆ ಕರೆ ಕೊಟ್ಟಿವೆ. ಈ ಮುಷ್ಕರದಲ್ಲಿ 25 ಕೋಟಿಗೂ ಹೆಚ್ಚು ಕಾರ್ಮಿಕರು ಭಾಗವಹಿಸುವ ಸಾಧ್ಯತೆ ಇದ್ದು, ಬ್ಯಾಂಕ್‌, ಪೋಸ್ಟ್‌, ವಿಮೆ ಕಂಪನಿಗಳು, ಗಣಿ ಸಂಸ್ಥೆಗಳು, ಖಾಸಗಿ ಸಾರಿಗೆ ಸಂಸ್ಥೆಗಳ ಸೇವೆಗಳಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.

ಕಾರ್ಮಿಕ ವಿರೋಧಿ ಮತ್ತು ರೈತ ವಿರೋಧಿ ನೀತಿಗಳನ್ನು ಕೇಂದ್ರ ಸರ್ಕಾರ ಅನುಸರಿಸುತ್ತಿದೆ. ಅಲ್ಲದೆ, ಸರ್ಕಾರ ಕಾರ್ಪೊರೇಟ್ ಕಂಪನಿಗಳಿಗೆ ಬೆಂಬಲ ನೀಡುತ್ತಿದೆ. ಎಂದು ಟ್ರೇಡ್ ಯೂನಿಯನ್‌ಗಳು ಆರೋಪಿಸಿವೆ. ಸರ್ಕಾರಕ್ಕೆ ಬಿಸಿ ಮುಟ್ಟಿಸುವ ನಿಟ್ಟಿನಲ್ಲಿ ಕಾರ್ಮಿಕ ಸಂಘಟನೆಗಳು ಕಳೆದ ಕೆಲವು ತಿಂಗಳುಗಳಿಂದ ಈ ಬಂದ್‌ಗಾಗಿ ಸಿದ್ಧತೆ ನಡೆಸುತ್ತಿದ್ದವು.

ಕೇಂದ್ರ ಸರ್ಕಾರದ ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಅವರಿಗೆ ಕಳೆದ ವರ್ಷ ಸಲ್ಲಿಸಿದ 17 ಬೇಡಿಕೆಗಳನ್ನು ಈಡೇರಿಸದ ಕಾರಣ ಈ ಪ್ರತಿಭಟನೆ ನಡೆಯುತ್ತಿದೆ. ಬೇಡಿಕೆ ಶೀಘ್ರ ಜಾರಿಗೆ ಸರ್ಕಾರದ ಗಮನ ಸೆಳೆಯಲು ಮುಷ್ಕರಕ್ಕೆ ಸಂಘಟನೆಗಳು ಮುಂದಾಗಿವೆ.

ಈ ಬಗ್ಗೆ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್‌ನ ಅಮರಜೀತ್ ಕೌರ್ ಅವರು  ಮಾತನಾಡಿ, ರೈತರು ಮತ್ತು ಗ್ರಾಮೀಣ ಕಾರ್ಮಿಕರು ಸಹ ಈ ಮುಷ್ಕರದಲ್ಲಿ ಭಾಗವಹಿಸಲಿದ್ದಾರೆ. ಬಂದ್‌ನಿಂದಾಗಿ ಬ್ಯಾಂಕಿಂಗ್, ಪೋಸ್ಟಲ್, ವಿಮೆ, ಕಲ್ಲಿದ್ದಲು ಗಣಿ, ಕಾರ್ಖಾನೆ ಮತ್ತು ಸಾರಿಗೆ ಸೇವೆಗಳಲ್ಲಿ ತೊಂದರೆಯಾಗಬಹುದು ಎಂದಿದ್ದಾರೆ

ಶಾಲೆಗಳು ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸುತ್ತವೆ. ಒಂದು ವೇಳೆ ಖಾಸಗಿ ಬಸ್‌ಗಳ ಸಿಬ್ಬಂದಿ ಬಂದ್‌ ಬೆಂಬಲಿಸಿ ಮುಷ್ಕರ ಕೈಗೊಂಡರೆ ಬಸ್‌ಗಳನ್ನು ಅವಲಂಭಿಸಿ ಶಾಲೆ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಸಮಸ್ಯೆ ಉಂಟಾಗಬಹುದು.