ಅಮೆರಿಕ: ಟೆಕ್ ದೈತ್ಯ ಆಪಲ್‌ ಕಂಪನಿಯಲ್ಲಿ ಉನ್ನತ ಹುದ್ದೆಗೇರಿದ ಭಾರತೀಯ ಮೂಲದ ಸಬಿಹ್‌ ಖಾನ್‌

 



ಅಮೆರಿಕ: ದೈತ್ಯ ಟೆಕ್ ಕಂಪನಿ ಆಪಲ್‌ನ ಮುಖ್ಯ ಕಾರ್ಯಾಚರಣಾ ಅಧಿಕಾರಿಯಾಗಿ ಭಾರತೀಯ ಮೂಲದ ಸಬಿಹ್ ಖಾನ್ ನೇಮಕಗೊಂಡಿದ್ದಾರೆ. ಜೆಫ್ ವಿಲಿಯಮ್ಸ್ ಅವರಿಂದ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಸಬಿಹ್ ಖಾನ್ 1995ರಿಂದ ಆಪಲ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿಂದೆ ಕಂಪನಿಯ ಕಾರ್ಯಾಚರಣೆ ವಿಭಾಗದಲ್ಲಿ ಹಿರಿಯ ಉಪಾಧ್ಯಕ್ಷರಾಗಿದ್ದರು. ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ಜನಿಸಿದ ಖಾನ್, ಟಫ್ಟ್ಸ್ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ. 

ಸಬಿಹ್‌ ಖಾನ್‌ ಭಾರತೀಯ ಮೂಲದವರಾಗಿದ್ದು, ಜೆಫ್ ವಿಲಿಯಮ್ಸ್ ಅವರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಅಮೆರಿಕ ಮೂಲದ ಕಂಪನಿ ಜುಲೈ 8ರ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಸಂಸ್ಥೆಯ ದೀರ್ಘಾವಧಿಯ ಉತ್ತರಾಧಿಕಾರಿ ಯೋಜನೆಯ ಭಾಗವಾಗಿ ಖಾನ್‌ ಅವರನ್ನು ನೇಮಕ ಮಾಡಲಾಗಿದೆ.

58 ವರ್ಷದ ಸಬಿಹ್‌ ಖಾನ್ ಕಳೆದ 30 ವರ್ಷಗಳಿಂದ ಆಪಲ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರಸ್ತುತ ಕಂಪನಿಯ ಕಾರ್ಯಾಚರಣೆ ವಿಭಾಗದಲ್ಲಿ ಹಿರಿಯ ಉಪಾಧ್ಯಕ್ಷರಾಗಿದ್ದಾರೆ. ಜಾಗತಿಕ ಮಟ್ಟದಲ್ಲಿ ಕಂಪನಿಯ ಪೂರೈಕೆ ಸರಪಳಿ, ಪೂರೈಕೆದಾರರ ಜವಾಬ್ದಾರಿ ಕಾರ್ಯಕ್ರಮಗಳು ಮತ್ತು ಕಾರ್ಯಾಚರಣೆ ತಂಡಗಳನ್ನು ನೋಡಿಕೊಳ್ಳುತ್ತಿದ್ದಾರೆ.