ಮಣಿಪಾಲ: ಮಾಹೆ ,
ಕಮಲ್ ಎ. ಬಾಳಿಗಾ ಚಾರೀಟೇಬಲ್ ಟ್ರಸ್ಟ್ ಮುಂಬೈ ,ಡಾ. ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ ಉಡುಪಿ ಮತ್ತು ಉಡುಪಿ ಜಿಲ್ಲಾ ಪೊಲೀಸ್ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಜಂಟಿ ಆಶ್ರಯದಲ್ಲಿ ವಿಶ್ವ ಮಾದಕ ದ್ರವ್ಯ ವ್ಯಸನ ವಿರೋಧಿ ದಿನವನ್ನು ಆಚರಿಸಲಾಯಿತು. ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಡಾ ಟಿ ಎಂ ಪೈ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಮಾಹೆ ಉಪ ಕುಲಾಧಿಪತಿ ಲೆಫ್ಟಿನೆಂಟ್ ಜನರಲ್ ಡಾ.ಎಂ.ಡಿ.ವೆಂಕಟೇಶ್ ಉದ್ಘಾಟಿಸಿದರು.
ಬಳಿಕ ಮಾತನಾಡಿ ,ಈ ದಿನದ ಪ್ರಮುಖ ಉದ್ದೇಶ ಯುವಜನತೆಯಲ್ಲಿ ಮಾದಕ ದ್ರವ್ಯ ವ್ಯಸನದಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವುದು.ಮಾದಕ
ವ್ಯಸನಗಳು ಜಾಗತಿಕ ಸಮಸ್ಯೆಯಾಗಿದೆ.ಇದಕ್ಕೆ ಪರಿಹಾರ ಕಂಡುಕೊಳ್ಳಲು ದೊಡ್ಡ ಆಂದೋಲನದ ಅಗತ್ಯವಿದೆ ಎಂಬ ಸಂದೇಶ ಸಾರಿದರು.
ಡಾ. ಎ.ವಿ. ಬಾಳಿಗಾ ಸಮೂಹ ಸಂಸ್ಥೆಗಳ ನಿರ್ದೇಶಕ ಡಾ. ಪಿ. ವಿ. ಭಂಡಾರಿ, ಮದ್ಯ ಮಾದಕ ವಸ್ತುಗಳ ಸೇವನೆಯಿಂದ ಯುವ ಜನತೆಯ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿಸಿ ಕಾರ್ಯಕ್ರಮದ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಮುಖ್ಯ ಅತಿಥಿ ,ಪ್ರಾಂಶುಪಾಲೆ ಲೀಲಾಬಾಯಿ ಭಟ್ ಮಾತನಾಡಿ , ಯುವ ಜನತೆ ದೇಶದ ಆಸ್ತಿ, ವ್ಯಸನಗಳಿಗೆ ಬಲಿಯಾಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ ಎಂದು ಆಶಯ ನುಡಿದರು.ಮುಖ್ಯ ಅತಿಥಿಯಾಗಿ ಆಗಮಿಸಿದ ಜಿಲ್ಲಾ ಎಸ್ಪಿ ಹರಿರಾಮ್ ಶಂಕರ್ , ವಿಧ್ಯಾರ್ಥಿಗಳಿಗೆ ಮಾದಕ ವ್ಯಸನ ಹಾಗೂ ದುಶ್ಚಟಗಳಿಗೆ ಒಮ್ಮೆ ಬಿದ್ದರೆ ಬದುಕಿನಲ್ಲಿ ಎದ್ದು ಬರಲು ಕಷ್ಟ ಸಾಧ್ಯ, ಈ ಬಗ್ಗೆ ಜಾಗೃತರಾಗಿರಬೇಕು ಎಂದು ಹೇಳಿದರು.ಡಾ ಗೀತಾ ಮಯ್ಯ,ಡಾ ಅರವಿಂದ್ ಕುಮಾರ್ ಪಾಂಡೆ, ಡಾ ರಶ್ಮಿ ಯೋಗೇಶ್ ಪೈ,ಡಾ. ರೀನಾ ಪರ್ವಿನ್ ಉಪಸ್ಥಿತರಿದ್ದರು.
ಕಾರ್ಯಾಗಾರದಲ್ಲಿ ಉಡುಪಿಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು, ಎನ್.ಎಸ್.ಎಸ್./ಎನ್.ಸಿ.ಸಿ,ಸ್ಕೌಟ್ಸ್ ಆಂಡ್ ಗೈಡ್ಸ್‌ನಲ್ಲಿ ಸಕ್ರಿಯವಾಗಿರುವ ಇಬ್ಬರು ವಿದ್ಯಾರ್ಥಿಗಳು ಮತ್ತು ನರ್ಸಿಂಗ್ ವಿಧ್ಯಾರ್ಥಿಗಳನ್ನೊಳಗೊಂಡ 373 ವಿದ್ಯಾರ್ಥಿಗಳು ಕಾರ್ಯಕ್ರಮದ ಪ್ರಯೋಜನವನ್ನು ಪಡೆದರು.ಇವರಿಗೆ ಮಾದಕ ದ್ರವ್ಯ ವ್ಯಸನದಿಂದ ಉಂಟಾಗುವ ದುಷ್ಪ ರಿಣಾಮಗಳು, ಮಾದಕ ದ್ರವ್ಯ ವ್ಯಸನಿಯನ್ನು ಗುರುತಿಸುವ ಬಗೆ, ಕಾನೂನು ಚೌಕಟ್ಟಿನಲ್ಲಿ ಮಾದಕ ದ್ರವ್ಯವ್ಯಸನದಿಂದ ಎದುರಾಗುವ ಸಮಸ್ಯೆಗಳು, ಮಾದಕ ದ್ರವ್ಯ ವ್ಯಸನದಿಂದ ಹೊರಬರುವಲ್ಲಿ ನಮ್ಮ ಪಾತ್ರ ಎಂಬ ವಿಷಯದ ಬಗ್ಗೆ ಮಾಹಿತಿ ನೀಡಲಾಯಿತು.
.jpeg)