ಉಡುಪಿ: ಜಿಲ್ಲೆಯಲ್ಲಿ ಹೆಚ್ಚೆಚ್ಚು ಕೈಗಾರಿಕಾ ಘಟಕಗಳನ್ನು ಸ್ಥಾಪಿಸುವುದರೊಂದಿಗೆ ಸ್ಥಳೀಯರಿಗೆ ಉದ್ಯೋಗ ಸಿಗುವಂತೆ ಮಾಡಬೇಕು ಎಂದು ಡಿಸಿ ಸ್ವರೂಪಾ ಟಿ.ಕೆ. ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕೈಗಾರಿಕೆ ಸ್ಪಂದನ ಸಮಿತಿ, ಜಿಲ್ಲಾ ಮಟ್ಟದ ರಫ್ತು ಉತ್ತೇಜನ ಸಮಿತಿ ಹಾಗೂ ಪ್ರಧಾನಮಂತ್ರಿ ಉದ್ಯೋಗ ಸೃಜನ ಯೋಜನೆಯ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಅಗತ್ಯ ಮೂಲ ಸೌಕರ್ಯ ಒಳಗೊಂಡ ಕೈಗಾರಿಕಾ ಪ್ರದೇಶಗಳನ್ನು ನಿರ್ಮಿಸಿದರೆ ಕೈಗಾರಿಕೆಗಳು ಹೆಚ್ಚೆಚ್ಚು ಬರುತ್ತವೆ. ಇದರಿಂದ ಸ್ಥಳೀಯರಿಗೆ ಉದ್ಯೋಗ ಲಭಿಸುತ್ತವೆ ಎಂದರು.
ಹೆಬ್ರಿ ತಾಲೂಕಿನ ಶಿವಪುರದಲ್ಲಿ 74.84 ಎಕ್ರೆ, ಕೆರೆಬೆಟ್ಟುವಿನಲ್ಲಿ 38.75 ಎಕ್ರೆ, ಕಾರ್ಕಳದ ನಿಟ್ಟೆಯಲ್ಲಿ 50.42 ಎಕ್ರೆ ಹಾಗೂ ಬ್ರಹ್ಮಾವರ ತಾಲೂಕಿನ ಉಪ್ಪೂರು 101.19 ಎಕ್ರೆ ಪ್ರದೇಶದಲ್ಲಿ ಹೊಸ ಕೈಗಾರಿಕೆ ಪ್ರದೇಶ ನಿರ್ಮಿಸಲು ಭೂ ಸ್ವಾಧೀನ ಮೊದಲಾದ ಪ್ರಕ್ರಿಯೆ ಕೈಗೊಳ್ಳಲು ಅವರು ನಿರ್ದೇಶಿಸಿದರು.
ಕೈಗಾರಿಕೆ ಪ್ರಾರಂಭಿಸಲು ನಿವೇಶನ ಪಡೆದವರು ತ್ವರಿತವಾಗಿ ಘಟಕಗಳನ್ನು ಸ್ಥಾಪಿಸಬೇಕು. ತಪ್ಪಿದಲ್ಲಿ ಮಂಜೂರಾದ ನಿವೇಶನ ವಾಪಸ್ ಪಡೆದು ಅರ್ಹರಿಗೆ ಹಂಚಲಾಗುವುದು. ಡಾ| ಸರೋಜಿನಿ ಮಹಿಷಿ ವರದಿ ಅನ್ವಯ ಕೈಗಾರಿಕೆಗಳಲ್ಲಿ ಸ್ಥಳೀಯ ಕನ್ನಡಿಗರಿಗೆ ಉದ್ಯೋಗ ಕಲ್ಪಿಸಬೇಕು. ಜಿಲ್ಲೆಯ ಕೈಗಾರಿಕೆಗಳಲ್ಲಿ ಡಿ ವರ್ಗದ ಹುದ್ದೆಗಳಿಗೆ ವಿದ್ಯಾರ್ಹತೆ ಇಲ್ಲದಿದ್ದರೂ ನೇಮಿಸಿಕೊಳ್ಳಬೇಕು. ಆದರೆ ಇದು ನಿರೀಕ್ಷಿತ ಮಟ್ಟದಲ್ಲಿ ಇಲ್ಲ. ಈ ಬಗ್ಗೆ ಕೈಗಾರಿಕೆಗಳ ಮಾಲಕರು ಹೆಚ್ಚು ಗಮನ ಹರಿಸಬೇಕು ಎಂದರು.
ಬೆಳಪು ಕೈಗಾರಿಕೆ ಪ್ರದೇಶದ ಸಂಪರ್ಕ ರಸ್ತೆ ವಿಸ್ತರಣೆಗೆ ಅಗತ್ಯವಿರುವ ಭೂಮಿಯ ಭೂ ಸ್ವಾಧೀನ ಪ್ರಕ್ರಿಯೆ ಪ್ರಗತಿಯಾಗಿಲ್ಲ. ಈ ಕಾರ್ಯವನ್ನು ಆದ್ಯತೆಯ ಮೇಲೆ ಕೈಗೊಳ್ಳಬೇಕು. ಭೂ ಪರಿಹಾರ ಪಡೆಯಲು ನಿರಾಸಕ್ತಿ ತೋರಿರುವ ಭೂ ಮಾಲಕರಿಗೆ ಸಂಬಂಧಿಸಿದ ಪರಿಹಾರ ಮೊತ್ತವನ್ನು ನ್ಯಾಯಾಲಯದಲ್ಲಿ ಠೇವಣಿಯಿಟ್ಟು ಮುಂದಿನ ಕ್ರಮ ಕೈಗೊಳ್ಳಬೇಕು. ಶಿವಳ್ಳಿ ಕೈಗಾರಿಕೆ ಪ್ರದೇಶದಲ್ಲಿ ಮೂಲ ಮಂಜೂರಾತಿದಾರರು ನಿವೇಶನಗಳನ್ನು ಇತರರಿಗೆ ಲೀಸ್ ನೀಡಿದ್ದು, ಅವರ ಆರ್‌ಎಂಸಿ ಘಟಕಗಳನ್ನು ಅನುಮತಿ ಪಡೆಯದೇ ಚಟುವಟಿಕೆ ನಡೆಸು ತ್ತಿರುತ್ತಾರೆ. ಇದರಿಂದಾಗಿ ಮಾಲಿನ್ಯ ಹೆಚ್ಚಾಗಿದೆ ಎಂದರು.
