ಸಿದ್ದರಾಮಯ್ಯ ವಿರುದ್ಧ ‘ಸ್ಟಿಂಗ್’ - ಮೊಬೈಲ್ ಫೋನ್‌ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ದೆಹಲಿ ನಿವಾಸದಲ್ಲೇ ಹಸ್ತಾಂತರ!

 


ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ನಡೆದಿರುವ ‘ಸ್ಟಿಂಗ್’ ಕಾರ್ಯಾಚರಣೆಗೆ ಸಂಬಂಧಿಸಿದ ವಿಡಿಯೊ ಅಪ್‌ಲೋಡ್‌ ಮಾಡಲು ಬಳಸಿದ ಮೊಬೈಲ್ ಫೋನ್‌ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ದೆಹಲಿ ನಿವಾಸದಲ್ಲೇ ಹಸ್ತಾಂತರ ಮಾಡಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಸೀಮಾಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.


ಈ ಸಂಬಂಧ ಅಕ್ಟೋಬರ್ 24ರಂದು ಸಿಸಿಬಿ ಪೊಲೀಸರು ದೆಹಲಿಯಲ್ಲಿ ಆರೋಪಿ ರಿತೇಶ್‌ ಪಾಂಡೆ ಅವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಎಚ್.ಡಿ. ಕುಮಾರಸ್ವಾಮಿ ಅವರ ಹೆಸರು ಪ್ರಸ್ತಾಪಿಸಿದ್ದಾರೆ ಎಂದು ಸಿಂಗ್ ಹೇಳಿದರು.


‘ಪ್ರಕರಣದಲ್ಲಿ ರಿತೇಶ್ ಪಾಂಡೆ ಮಾತ್ರವಲ್ಲದೆ ವಿನೋದ್ ಶರ್ಮಾ ಮತ್ತು ಪ್ರಜ್ವಲ್ ಪ್ರಸಾದ್ ಎಂಬವರು ಭಾಗಿಯಾಗಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಪ್ರಜ್ವಲ್ ಪ್ರಸಾದ್ ನೀಡಿದ ಸೂಚನೆಯಂತೆ ವಿನೋದ್ ಶರ್ಮಾ ಮತ್ತು ರಿತೇಶ್ ಪಾಂಡೆ ದೆಹಲಿಯ ಕರೋಲ್‌ ಬಾಗ್‌ ಪ್ರದೇಶದಲ್ಲಿರುವ ಮಾರುಕಟ್ಟೆಯಲ್ಲಿ ಮೊಬೈಲ್ ಫೋನ್‌ಗಳನ್ನು ಖರೀದಿ ಮಾಡಿದ್ದರು. ಖರೀದಿಸಿದ ಫೋನ್‌ಗಳನ್ನು ತಂದು ದೆಹಲಿಯಲ್ಲಿರುವ ಎಚ್. ಡಿ. ಕುಮಾರಸ್ವಾಮಿ ಅವರ ಅಧಿಕೃತ ನಿವಾಸದಲ್ಲೇ ಪ್ರಜ್ವಲ್ ಪ್ರಸಾದ್‌ಗೆ ಹಸ್ತಾಂತರಿಸಲಾಗಿತ್ತು ಎಂಬುದನ್ನು ವಿಚಾರಣೆ ವೇಳೆ ರಿತೇಶ್ ಪಾಂಡೆ ತಿಳಿಸಿದ್ದಾರೆ’ ಎಂದು ಸಿಂಗ್ ಮಾಹಿತಿ ನೀಡಿದರು