ಉಡುಪಿ: ಮಣಿಪಾಲದ ಶಿವಳ್ಳಿ ಗ್ರಾಮದ ಮಾಂಡವಿ ಎಮರಾಲ್ಡ್ ಅಪಾರ್ಟ್ಮೆಂಟ್ ಎದುರಿನ ಸಾರ್ವಜನಿಕ ರಸ್ತೆಯಲ್ಲಿ ಬೇಜವಾಬ್ದಾರಿಯಿಂದ ಪಟಾಕಿ ಸಿಡಿಸಿ, ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ತೊಂದರೆ ಉಂಟುಮಾಡಿದ ಆರೋಪದ ಮೇಲೆ 20 ಮಂದಿಯ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನ. 8ರಂದು ರಾತ್ರಿ 11 ಗಂಟೆ ಸುಮಾರಿಗೆ 15ರಿಂದ 20 ಮಂದಿ ಯುವಕರು ಗುಂಪುಗೂಡಿ ರಸ್ತೆಯಲ್ಲಿ ಪಟಾಕಿ ಸಿಡಿಸುತ್ತಿದ್ದರು. ಅಲ್ಲದೆ, ಕೈಯಲ್ಲಿ ಪಟಾಕಿ ಹಿಡಿದು ಹಚ್ಚಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ಸಾರ್ವಜನಿಕರು, ವಾಹನ ಸವಾರರು ಹಾಗೂ ವಾಹನಗಳ ಮೇಲೆ ಎಸೆಯುತ್ತಿದ್ದರು ಎನ್ನಲಾಗಿದೆ.
ಈ ವೇಳೆ ಅನಿಲ್, ಕೀರ್ತಿ, ಡೆನಿಸ್, ರವಿಶೆಟ್ಟಿ ಹಾಗೂ ಜ್ಞಾನೇಶ್ವರ್ ಎಂಬವರು ತೊಂದರೆಗೊಳಗಾಗಿದ್ದು, ಘಟನೆಗೆ ಪ್ರತ್ಯಕ್ಷ ಸಾಕ್ಷಿಗಳಾಗಿದ್ದಾರೆ. ಮಾಹಿತಿ ಪಡೆದ ಮಣಿಪಾಲ ಪೊಲೀಸರು ಸ್ಥಳಕ್ಕೆ ಧಾವಿಸಿದಾಗ, ಯುವಕರು ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆಯೂ ಪಟಾಕಿ ಎಸೆದು ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಸಂಬಂಧ ಪೊಲೀಸ್ ಉಪನಿರೀಕ್ಷಕ ಶಂಭುಲಿಂಗಯ್ಯ ಎಂ.ಇ. ಅವರು ದೂರು ನೀಡಿದ್ದು, ಆರ್ಯನ್ ಕುಮಾರ್, ಆದಿತ್ಯ ಪ್ರಜಾಪತಿ, ಪ್ರಿಯಾಂಶ್, ಸಿದ್ದಾಂತ್ ಸಿಂಗ್, ಪ್ರಿಯಜಿತ್ ಸಿಂಗ್ ಸೇರಿದಂತೆ ಇತರ 15 ಮಂದಿಯ ವಿರುದ್ಧ ನ್ಯಾಯಾಲಯದ ಅನುಮತಿ ಪಡೆದು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅ.ಕ್ರ. 184/2026ರಂತೆ ಭಾರತೀಯ ನ್ಯಾಯ ಸಂಹಿತೆಯ ಕಲಂ 224, 292 ಹಾಗೂ 3(5)ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
