ದೇಹ ಮನಸ್ಸು ಒಂದೇ ನಾಣ್ಯದ ಮುಖ, ತಪ್ಪಿದರೆ ಮಾರಕ: ಡಾ.ಹೇಮಂತ್ ಕುಮಾರ್

 


ಉಡುಪಿ: ಒಂದೇ ನಾಣ್ಯದ ಎರಡು ಮುಖಗಳಂತಿರುವ ಮನಸ್ಸು ದೇಹ ಒಂದಕ್ಕೊಂಡು ಪೂರಕ ಪ್ರೇರಕವಾಗಿದ್ದು ತಪ್ಪಿದರೆ ದೇಹ, ಕುಟುಂಬ, ಸಮಾಜ, ದೇಶಕ್ಕೆ ಮಾರಕ ಎಂದು ಮಂಗಳೂರು ಈ ಎಸ್ ಐ ಆಸ್ಪತ್ರೆಯ ಆಡಳಿತಾತ್ಮಕ ವಿಮಾ ವೈದ್ಯಾಧಿಕಾರಿ ಡಾ.ಹೇಮಂತ್ ಕುಮಾರ್ ಹೇಳಿದ್ದಾರೆ. 

ಅವರು ಮುಂಬೈಯ ಕಮಲ್ ಎ.ಬಾಳಿಗಾ ಚಾರಿಟಬಲ್ ಟ್ರಸ್ಟ್ ಮತ್ತು ಒನ್ ಗುಡ್ ಸ್ಟೆಪ್ ಸಹಯೋಗದಲ್ಲಿ ದೊಡ್ಡಣಗುಡ್ಡೆ ಯ ಡಾ. ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯ ಕಮಲ್ ಎ.ಬಾಳಿಗಾ ಸಭಾಂಗಣದಲ್ಲಿ ನವಜೀವನ ಲೇ ಕೌನ್ಸೆಲರ್ ಸಮ್ಮಿಲನ ಹಾಗೂ ಎಲ್ ಪಿಸಿ ೧೦ನೇ ತಂಡವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು. 








ಮನಸ್ಸಿನ ಭಾವನೆ, ಮಾತು ನಿರ್ಲಕ್ಷ್ಯ ಸಲ್ಲದು. ದೈಹಿಕ ಆರೋಗ್ಯಕ್ಕೆ ಮಾನಸಿಕ ಸಮತೋಲನ ಮುಖ್ಯ. ಆಧುನಿಕ, ಒತ್ತಡದ ಜೀವನದಲ್ಲಿ ಮಾನಸಿಕ ತಲೆನೋವು, ತಲೆಯ ಸ್ಟ್ರೋಕ್ ಹೆಚ್ಚುತ್ತಿದೆ. ಇಂದು ಬಹುತೇಕ ಕಾಯಿಲೆಗಳಿಗೆ ಮನಸ್ಸೇ ಮೂಲವಾಗುತ್ತಿದೆ, ಮನಸ್ಸಿಗೂ ಶಾಂತಿ, ವಿಶ್ರಾಂತಿ ಬೇಕು ಎಂದರು. 



ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಪಿ.ವಿ.ಭಂಡಾರಿ ಅಧ್ಯಕ್ಷತೆ ವಹಿಸಿ, ಸಮಾಜದಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆ ತಡೆಗೆ ಹೆಲ್ಪ್ ಲೈನ್ ವ್ಯವಸ್ಥೆ ಆರಂಭಿಸಲು ಲಯನ್ಸ್ ಸಹಯೋಗದ ತಾತ್ವಿಕ ಒಪ್ಪಿಗೆ ದೊರೆತಿದೆ. ಚೈಲ್ಡ್ ಗೈಡೆನ್ಸ್ ಕ್ಲಿನಿಕ್ ಆರಂಭಕ್ಕೂ ಉದ್ದೇಶಿಸಲಾಗಿದೆ ಎಂದು ಹೇಳಿದರು. 


ಒನ್ ಗುಡ್ ಸ್ಟೆಪ್ ಸಂಸ್ಥೆಯ ಅಮಿತಾ ಪೈ, ಮಣಿಪಾಲ ರೋಟರಿಯ ಶಶಿಕಲಾ ರಾಜವರ್ಮ, ಮೂಡುಬಿದಿರೆ ಆಳ್ವಾಸ್ ಮನೋವಿಜ್ಞಾನ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ದೀಪ ಕೊಠಾರಿ, ಮನೋವೈದ್ಯ ಡಾ. ಮಾನಸ ಈ.ಆರ್. ಡಾ.ವಿರೂಪಾಕ್ಷ ದೇವರಮನೆ ಉಪಸ್ಥಿತರಿದ್ದರು. 


ಪೂರ್ಣಿಮಾ ಪ್ರಾರ್ಥಿಸಿದರು. ಆಸ್ಪತ್ರೆಯ ಆಡಳಿತಾಧಿಕಾರಿ ಸೌಜನ್ಯಾ ಶೆಟ್ಟಿ ಸ್ವಾಗತಿಸಿದರು. ಆಪ್ತ ಸಮಾಲೋಚಕಿ ದೀಪಶ್ರೀ ಕಾರ್ಯಕ್ರಮ ನಿರೂಪಿಸಿದರು. ಆಪ್ತ ಸಮಾಲೋಚಕಿ ಪದ್ಮಾ ರಾಘವೇಂದ್ರ ವಂದಿಸಿದರು.