ಉಡುಪಿ: ಮಲ್ಪೆ ಬಾಬುತೋಟ ಧಕ್ಕೆಯ ಬಳಿಯ ಖಾಲಿ ಜಾಗದಲ್ಲಿ ಮಲಗುತ್ತಿದ್ದ ವ್ಯಕ್ತಿಯನ್ನು ಕುತ್ತಿಗೆಗೆ ಆಯುಧದಿಂದ ಇರಿದು ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಮಲ್ಪೆ ಪೊಲೀಸರು ಆರೋಪಿಯನ್ನು ಹುಬ್ಬಳ್ಳಿಯ ಹೊರವಲಯದಲ್ಲಿ ಬಂಧಿಸಿದ್ದಾರೆ.
ಕೊಲೆಯಾದವರನ್ನು ಆಂಧ್ರಪ್ರದೇಶ ಮೂಲದ ಪರಮೇಶಿ ಅಲಿಯಾಸ್ ಪರಮ್ ವೇಲಿ (55) ಎಂದು ಗುರುತಿಸಲಾಗಿದೆ. ಕಳೆದ ಮೂರು ವರ್ಷಗಳಿಂದ ಮಲ್ಪೆ ಬಂದರು ಪ್ರದೇಶದಲ್ಲಿ ಗುಜರಿ ವಸ್ತುಗಳನ್ನು ಹೆಕ್ಕಿಕೊಂಡು ಜೀವನ ನಡೆಸುತ್ತಿದ್ದ ಅವರು, ಮಲ್ಪೆ ಮರೈನ್ ಏಜೆನ್ಸಿ ಪಕ್ಕದ ಖಾಲಿ ಜಾಗದಲ್ಲಿ ಪ್ಲಾಸ್ಟಿಕ್ ಗೋಣಿ ಚೀಲ ಹಾಕಿಕೊಂಡು ಮಲಗುತ್ತಿದ್ದರು.
ಸೆ.28ರಂದು ಸಂಜೆ 7 ಗಂಟೆಗೆ ಏಜೆನ್ಸಿ ಮುಚ್ಚಿ ತೆರಳುವಾಗ ಪರಮೇಶಿ ಅಲ್ಲೇ ಕುಳಿತಿದ್ದರು. ಸೆ.29ರಂದು ಬೆಳಗ್ಗೆ 8.30ಕ್ಕೆ ಏಜೆನ್ಸಿಗೆ ಬಂದ ಪಿರ್ಯಾದಿದಾರರು, ಪರಮೇಶಿ ಗೋಣಿ ಚೀಲದ ಮೇಲೆ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ಕುತ್ತಿಗೆ ಭಾಗದಲ್ಲಿ ಇರಿತದ ಗಾಯವಾಗಿದ್ದು, ದುಷ್ಕರ್ಮಿಗಳು ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿತ್ತು.
ಈ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 107/2026ರಂತೆ ಬಿಎನ್‌ಎಸ್ ಕಲಂ 103ರಡಿ ಪ್ರಕರಣ ದಾಖಲಾಗಿತ್ತು.
ಉಡುಪಿ ಉಪವಿಭಾಗದ ಡಿವೈಎಸ್‌ಪಿ ಬೆಳ್ಳಿಯಪ್ಪ ಕೆ.ಯು. ಹಾಗೂ ಮಲ್ಪೆ ವೃತ್ತ ನಿರೀಕ್ಷಕ ರಾಮಚಂದ್ರ ನಾಯಕ್ ಅವರ ಮಾರ್ಗದರ್ಶನದಲ್ಲಿ, ಮಲ್ಪೆ ಠಾಣೆ ಪಿಎಸ್‌ಐ ಅನೀಲ್ ಕುಮಾರ್ ಡಿ. ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಹುಬ್ಬಳ್ಳಿ ಹೊರವಲಯದಲ್ಲಿ ಆರೋಗ್ಯ ದಾಸ್ ಅಲಿಯಾಸ್ ಕಾಮಿ (55) ಎಂಬಾತನನ್ನು ಬಂಧಿಸಿದೆ. ಹೆಚ್‌ಸಿ ವಿಶ್ವನಾಥ್, ಹೆಚ್‌ಸಿ ಆದರ್ಶ ಹಾಗೂ ಸಿಪಿಸಿ ಕುಬೇರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
