ಉಡುಪಿ: ಒಂಟಿ ಮಹಿಳೆಯ ಮನೆಗೆ ನುಗ್ಗಿ ಚಿನ್ನದ ಸರ ಸುಲಿಗೆ: ಇಬ್ಬರ ಬಂಧನ : ಉಡುಪಿ ನಗರ ಪೊಲೀಸರ ಕಾರ್ಯಾಚರಣೆ; ₹5.53 ಲಕ್ಷ ಮೌಲ್ಯದ ಸೊತ್ತು ವಶ

 


ಉಡುಪಿ: ಒಂಟಿಯಾಗಿ ವಾಸಿಸುತ್ತಿದ್ದ 74 ವರ್ಷದ ಮಹಿಳೆಯ ಮನೆಗೆ ನುಗ್ಗಿ ಚಿನ್ನದ ಸರ ಸುಲಿಗೆ ಮಾಡಿದ ಆರೋಪದ ಮೇಲೆ ಇಬ್ಬರನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ₹5.53 ಲಕ್ಷ ಮೌಲ್ಯದ ಚಿನ್ನದ ಸರ, ಸ್ಕೂಟರ್ ಹಾಗೂ ಎರಡು ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.







ಅ.7ರಂದು ಸಂಜೆ ಜನಗಣತಿ (SIR) ಕುರಿತು ಮಾಹಿತಿ ಕೇಳುವ ನೆಪದಲ್ಲಿ ಇಬ್ಬರು ಅಪರಿಚಿತರು ನಿಟ್ಟೂರಿನ ಶಾಂತ ಕಾರಂತ್ (74) ಅವರ ಮನೆಗೆ ಬಂದಿದ್ದರು. ಈ ವೇಳೆ ಮಹಿಳೆಯನ್ನು ಕೆಳಕ್ಕೆ ದೂಡಿ, ಅವರ ಕುತ್ತಿಗೆಯಲ್ಲಿದ್ದ ಸುಮಾರು 30 ಗ್ರಾಂ ತೂಕದ ಚಿನ್ನದ ಸರವನ್ನು ಬಲವಂತವಾಗಿ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆ ನಡೆಸಿದ ಪೊಲೀಸರು ಅ.10ರಂದು ಮಣಿಪಾಲದ ಮಣ್ಣಪಳ್ಳದಲ್ಲಿ ವಾದಿರಾಜ್ ಗಾಣಿಗ (44) ಮತ್ತು ಸಚಿನ್ (30) ಎಂಬುವರನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಸುಲಿಗೆ ಮಾಡಿದ ಚಿನ್ನದ ಸರವನ್ನು ಮಣಿಪಾಲದ ಇಂಡಸ್ಟ್ರಿಯಲ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ಅಡವಿಟ್ಟಿರುವುದಾಗಿ ಆರೋಪಿಗಳು ತಿಳಿಸಿದ್ದಾರೆ.

ಪೊಲೀಸರು 34 ಗ್ರಾಂ ತೂಕದ ಚಿನ್ನದ ಸರ (₹4.50 ಲಕ್ಷ), ಕೃತ್ಯಕ್ಕೆ ಬಳಸಿದ ಓಲಾ ಎಲೆಕ್ಟ್ರಿಕ್ ಸ್ಕೂಟರ್ (₹90 ಸಾವಿರ) ಹಾಗೂ ಎರಡು ಮೊಬೈಲ್‌ಗಳನ್ನು (₹13 ಸಾವಿರ) ವಶಪಡಿಸಿಕೊಂಡಿದ್ದಾರೆ.

ಆರೋಪಿಗಳು ಸಾಲ ತೀರಿಸುವ ಮತ್ತು ಐಷಾರಾಮಿ ಜೀವನ ನಡೆಸುವ ಉದ್ದೇಶದಿಂದ ಕೃತ್ಯ ಎಸಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮೊದಲ ಆರೋಪಿ ಸಂತ್ರಸ್ತೆಯ ನೆರೆಮನೆಯವನಾಗಿದ್ದಾನೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಅವರ ನಿರ್ದೇಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯ್ಕ್ ಹಾಗೂ ಡಿವೈಎಸ್ಪಿ ಬೆಳ್ಳಿಯಪ್ಪ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತು.