ಉಡುಪಿ ಜಿಲ್ಲೆಯಲ್ಲಿ 45 ಸಾವಿರಕ್ಕೂ ಅಧಿಕ ಮಕ್ಕಳಿಗೆ ನೇತ್ರ ತಪಾಸಣೆ ಕಾರ್ಯಕ್ರಮಕ್ಕೆ ಚಾಲನೆ :1900 ಅಂಗನವಾಡಿಗಳಲ್ಲಿ ಆರು ವರ್ಷದೊಳಗಿನ ಮಕ್ಕಳ ಕಣ್ಣಿನ ತಪಾಸಣೆ

 


ಉಡುಪಿ: ಉಡುಪಿ ಜಿಲ್ಲೆಯ 1,900 ಅಂಗನವಾಡಿಗಳಲ್ಲಿ ಆರು ವರ್ಷದೊಳಗಿನ 45 ಸಾವಿರಕ್ಕೂ ಅಧಿಕ ಮಕ್ಕಳಿಗೆ ನೇತ್ರ ತಪಾಸಣೆ ನಡೆಸುವ ಬೃಹತ್ ನಿರಂತರ ಕಾರ್ಯಕ್ರಮಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಲಾಯಿತು.

ಉಡುಪಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ (ಕೆಎಎಸ್) ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಲಯನ್ಸ್ ಜಿಲ್ಲಾ ಗವರ್ನರ್ ಲಯನ್ ರಾಜೀವ್ ಕೋಟ್ಯಾನ್, ಉಪ ಗವರ್ನರ್ ಹರಿಪ್ರಸಾದ್ ರೈ ಹಾಗೂ ಮಾಜಿ ಗವರ್ನರ್ ಸಪ್ನಾ ಸುರೇಶ್ ಉಪಸ್ಥಿತರಿದ್ದರು.









ಕಾರ್ಯಕ್ರಮದ ಸಂಯೋಜಕ ಡಾ. ಎಚ್. ಗಣೇಶ್ ಪೈ ಅವರು ಕಾರ್ಯಕ್ರಮದ ಉದ್ದೇಶ ಹಾಗೂ ಅತಿಥಿಗಳನ್ನು ಪರಿಚಯಿಸಿದರು.

ರಾಷ್ಟ್ರೀಯ ಬಾಲ ಆರೋಗ್ಯ ಕಾರ್ಯಕ್ರಮದ ಡಾ. ಲತಾ ನಾಯಕ್ ಹಾಗೂ ಜಿಲ್ಲಾ ಅಂಧತ್ವ ನಿಯಂತ್ರಣಾಧಿಕಾರಿ ಕಾರ್ಯಕ್ರಮದ ಸಂದರ್ಭದಲ್ಲಿ ಮಾತನಾಡಿದರು.

ಸರಳೇಬೆಟ್ಟು ಅಂಗನವಾಡಿಯಲ್ಲಿ ನಡೆಸಿದ ತಪಾಸಣೆಯ ವೇಳೆ ಏಳು ಮಕ್ಕಳಿಗೆ ಕಣ್ಣಿನ ಸಮಸ್ಯೆ ಇರುವುದು ಪತ್ತೆಯಾಗಿದ್ದು, ಅವರಿಗೆ ತುರ್ತಾಗಿ ಕನ್ನಡಕದ ಅಗತ್ಯವಿದೆ ಎಂದು ಗುರುತಿಸಲಾಗಿದೆ. ಈ ಮಕ್ಕಳಿಗೆ ಲಯನ್ಸ್ ಕ್ಲಬ್ ಮಣಿಪಾಲದ ವತಿಯಿಂದ ಉಚಿತವಾಗಿ ಕನ್ನಡಕಗಳನ್ನು ವಿತರಿಸಲಾಗುವುದು.

ಲಯನ್ಸ್ ಕ್ಲಬ್ ಮಣಿಪಾಲವು ಮಣಿಪಾಲದ ಮಂಜುನಾಥ ನೇತ್ರ ಆಸ್ಪತ್ರೆಯ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಡಾ. ಶಕೀಲಾ ಮತ್ತು ಡಾ. ಸಚಿನ್ ಕಾರ್ಯಕ್ರಮಕ್ಕೆ ಸಹಕರಿಸುತ್ತಿದ್ದಾರೆ.