ಮಣಿಪಾಲ: ಸರಕಾರಿ ಜಮೀನಿನಲ್ಲಿ ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಪರವಾನಗಿ ಪಡೆಯದೆ ಸ್ಫೋಟಕ ವಸ್ತು ಬಳಸಿ ಬಂಡೆಕಲ್ಲು ಸ್ಫೋಟಿಸಿದ ಆರೋಪದ ಮೇಲೆ ಇಬ್ಬರ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೆ.5ರಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ಉಡುಪಿ ತಾಲೂಕು ಮರ್ಣೆ ಗ್ರಾಮದ ಕುಕ್ಕಿಪಲ್ಕೆ, ಸರ್ವೆ ನಂ.112/2ರ 1.54 ಎಕರೆ ಸರಕಾರಿ ಸ್ಥಿರಾಸ್ತಿ ಜಮೀನಿನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ಆರೋಪಿತರಾದ ರೋಜಿನಾ ರೋಡ್ರಿಗಸ್ ಹಾಗೂ ಅವರ ಪರವಾಗಿ ಅಧಿಕಾರ ಪತ್ರ ಹೊಂದಿರುವ ರಿಚಾರ್ಡ್ ಪೌಲ್ ಫೆರಾವೋ ಅವರು ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೆ ಜಾಗದಲ್ಲಿದ್ದ ಬಂಡೆಕಲ್ಲನ್ನು ಸ್ಫೋಟಕ ವಸ್ತು ಬಳಸಿ ಅನಧಿಕೃತವಾಗಿ ಸ್ಫೋಟಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಕುರಿತು ಮರ್ಣೆ ಗ್ರಾಮದ ಜೆರಾಲ್ಡ್ ನೊರೋಹ್ನ (42) ನೀಡಿದ ದೂರಿನ ಆಧಾರದಲ್ಲಿ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 150/2026, ಬಿಎನ್‌ಎಸ್ ಕಲಂ 288 ಜೊತೆಗೆ 3(5) ಹಾಗೂ ಸ್ಫೋಟಕ ಕಾಯ್ದೆಯ ಕಲಂ 9-B ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
