15 ದಿನದ ಹಸುಗೂಸಿನ ಮೆದುಳಿನ ಬೃಹತ್ ಗೆಡ್ಡೆ ಯಶಸ್ವಿಯಾಗಿ ತೆಗೆದ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ ವೈದ್ಯರು



ಮಣಿಪಾಲ, ಸೆ.24: ಕೇವಲ 15 ದಿನಗಳ ಪ್ರಾಯದಲ್ಲಿದ್ದ ಹಸುಗೂಸಿನ ತಲೆಬುರುಡೆಯೊಳಗಿದ್ದ ಬೃಹತ್ ಮೆದುಳಿನ ಗೆಡ್ಡೆಯನ್ನು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ನರಶಸ್ತ್ರಚಿಕಿತ್ಸಕರು ಯಶಸ್ವಿಯಾಗಿ ಸಂಪೂರ್ಣವಾಗಿ ತೆಗೆದುಹಾಕಿದ್ದಾರೆ. ಶಸ್ತ್ರಚಿಕಿತ್ಸೆಯ ಬಳಿಕ ನಿರಂತರ ವೈದ್ಯಕೀಯ ಮೇಲ್ವಿಚಾರಣೆ ಹಾಗೂ ಆರೈಕೆಯಿಂದ ಮಗು ಇದೀಗ ಮೂರು ವರ್ಷದ ಆರೋಗ್ಯವಂತ ಬಾಲಕನಾಗಿ ಬೆಳೆದಿದ್ದು, ಪ್ರಿಸ್ಕೂಲ್ ಶಿಕ್ಷಣಕ್ಕೆ ಸಿದ್ಧವಾಗಿದೆ.

ತಲೆಯ ಗಾತ್ರ ಅಸಹಜವಾಗಿ ದೊಡ್ಡದಾಗಿದ್ದ ಕಾರಣ 15 ದಿನದ ಶಿಶುವನ್ನು ಕಸ್ತೂರ್ಬಾ ಆಸ್ಪತ್ರೆಗೆ ಕರೆತರಲಾಗಿತ್ತು. ಎಂಆರ್‌ಐ ಪರೀಕ್ಷೆಯಲ್ಲಿ ತಲೆಬುರುಡೆಯೊಳಗೆ ದೊಡ್ಡ ದ್ರವ್ಯರಾಶಿ ಕಂಡುಬಂದಿದ್ದು, ಅದು ತೀವ್ರ ಸ್ವರೂಪದ ಗೆಡ್ಡೆಯಾಗಿರುವ ಸಾಧ್ಯತೆ ವ್ಯಕ್ತವಾಗಿತ್ತು. ನವಜಾತ ಶಿಶುವಿನ ರಕ್ತದ ಪ್ರಮಾಣ ಅತ್ಯಂತ ಕಡಿಮೆ ಇರುವುದರಿಂದ ಶಸ್ತ್ರಚಿಕಿತ್ಸೆ ವೇಳೆ ಅಲ್ಪ ಪ್ರಮಾಣದ ರಕ್ತ ನಷ್ಟವೂ ಗಂಭೀರ ಪರಿಣಾಮ ಉಂಟುಮಾಡುವ ಸಾಧ್ಯತೆ ಇತ್ತು.



ಅಪಾಯಗಳ ಕುರಿತು ಪೋಷಕರಿಗೆ ವಿವರಿಸಿ, ಅವರ ಒಪ್ಪಿಗೆ ಬಳಿಕ ವೈದ್ಯಕೀಯ ತಂಡ ಶಸ್ತ್ರಚಿಕಿತ್ಸೆ ನಡೆಸಿತು. ಅತ್ಯಂತ ಕ್ಲಿಷ್ಟಕರವಾಗಿದ್ದ ಶಸ್ತ್ರಚಿಕಿತ್ಸೆಯಲ್ಲಿ ಗೆಡ್ಡೆಯನ್ನು ಸಂಪೂರ್ಣವಾಗಿ ತೆಗೆದುಹಾಕುವಲ್ಲಿ ನರಶಸ್ತ್ರಚಿಕಿತ್ಸಕರು ಯಶಸ್ವಿಯಾದರು. ಬಳಿಕ ಮಗುವನ್ನು ಎನ್‌ಐಸಿಯುನಲ್ಲಿ ಇರಿಸಿ ತೀವ್ರ ನಿಗಾ ವಹಿಸಲಾಯಿತು. ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸಿದ ಮಗು ಒಂದು ವಾರದ ಬಳಿಕ ಸ್ಥಿರ ಆರೋಗ್ಯ ಸ್ಥಿತಿಯಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಯಿತು.

ನಂತರ ಮಗುವಿನ ನರಮಂಡಲ ಹಾಗೂ ದೈಹಿಕ ಬೆಳವಣಿಗೆಯನ್ನು ವೈದ್ಯಕೀಯ ತಂಡ ನಿಯಮಿತವಾಗಿ ಪರಿಶೀಲಿಸುತ್ತಿತ್ತು. ಮೂರು ವರ್ಷಗಳ ಬಳಿಕ ಮಗು ಆರೋಗ್ಯಕರ ಬೆಳವಣಿಗೆ ಹೊಂದಿದ್ದು, ಇದೀಗ ಪ್ರಿಸ್ಕೂಲ್‌ಗೆ ತೆರಳಲು ಸಿದ್ಧವಾಗಿದೆ.

ಈ ಚಿಕಿತ್ಸೆಯಲ್ಲಿ ನರಶಸ್ತ್ರಚಿಕಿತ್ಸೆ, ನವಜಾತ ಶಿಶು ಆರೈಕೆ, ಮಕ್ಕಳ ಆಂಕೊಲಾಜಿ, ತೀವ್ರ ನಿಗಾ ಹಾಗೂ ಪುನಶ್ಚೇತನ ವಿಭಾಗಗಳು ಸಮನ್ವಯದಿಂದ ಕಾರ್ಯನಿರ್ವಹಿಸಿವೆ. ನರಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ರಾಘವೇಂದ್ರ ನಾಯಕ, ನವಜಾತ ಶಿಶು ಆರೈಕೆ ತಂಡದ ಡಾ. ಶೀಲಾ ಎಸ್. ಮಥಾಯಿ ಹಾಗೂ ಮಕ್ಕಳ ಆಂಕೊಲಾಜಿ ವಿಭಾಗದ ಡಾ. ವಾಸುದೇವ್ ಭಟ್ ಸೇರಿದಂತೆ ವಿವಿಧ ತಜ್ಞರು ಚಿಕಿತ್ಸೆಯಲ್ಲಿ ಭಾಗಿಯಾಗಿದ್ದರು.

ಡಾ. ರಾಘವೇಂದ್ರ ನಾಯಕ ಮಾತನಾಡಿ, ನವಜಾತ ಶಿಶುವಿನಲ್ಲಿ, ಅದರಲ್ಲೂ ದೊಡ್ಡ ಗಾತ್ರದ ಗೆಡ್ಡೆ ಇದ್ದಾಗ ಶಸ್ತ್ರಚಿಕಿತ್ಸೆ ನಡೆಸುವುದು ಅತ್ಯಂತ ಸವಾಲಿನದ್ದು. ಮಗುವಿನ ರಕ್ತದ ಪ್ರಮಾಣ ಕಡಿಮೆ ಇರುವುದರಿಂದ ರಕ್ತ ನಷ್ಟವನ್ನು ನಿಯಂತ್ರಿಸುವುದು ಪ್ರಮುಖವಾಗಿತ್ತು. ಪೋಷಕರು ವೈದ್ಯಕೀಯ ತಂಡಕ್ಕೆ ಸಂಪೂರ್ಣ ಸಹಕಾರ ನೀಡಿದ್ದು, ಎಲ್ಲಾ ಅಪಾಯಗಳನ್ನು ಅರ್ಥಮಾಡಿಕೊಂಡ ಬಳಿಕ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಕ್ಲಿಷ್ಟಕರವಾಗಿದ್ದರೂ ಗೆಡ್ಡೆಯನ್ನು ಸಂಪೂರ್ಣವಾಗಿ ತೆಗೆದುಹಾಕಲು ಸಾಧ್ಯವಾಯಿತು ಎಂದು ತಿಳಿಸಿದರು.

ಮಾಹೆ ಮಣಿಪಾಲದ ಬೋಧನಾ ಆಸ್ಪತ್ರೆಗಳ ಮುಖ್ಯ ನಿರ್ವಹಣಾಧಿಕಾರಿ ಡಾ. ಸುಧಾಕರ್ ಕಂಟಿಪುಡಿ ಮಾತನಾಡಿ, ಇಂತಹ ಸಂಕೀರ್ಣ ಪ್ರಕರಣಗಳಲ್ಲಿ ವಿವಿಧ ವೈದ್ಯಕೀಯ ವಿಭಾಗಗಳ ಸಮನ್ವಯ ಅತ್ಯಂತ ಮುಖ್ಯ. ನರಶಸ್ತ್ರಚಿಕಿತ್ಸೆ, ನವಜಾತ ಶಿಶುಶಾಸ್ತ್ರ, ಮಕ್ಕಳ ಆಂಕೊಲಾಜಿ, ಕ್ರಿಟಿಕಲ್ ಕೇರ್ ಮತ್ತು ಪುನಶ್ಚೇತನ ತಂಡಗಳ ಒಗ್ಗಟ್ಟಿನ ಪ್ರಯತ್ನದಿಂದ ಈ ಫಲಿತಾಂಶ ಸಾಧ್ಯವಾಗಿದೆ ಎಂದು ಹೇಳಿದರು. ಮೂರು ವರ್ಷದ ಮಗು ಪ್ರಿಸ್ಕೂಲ್‌ಗೆ ಸಿದ್ಧವಾಗಿರುವುದು ಸಂತಸದ ಸಂಗತಿ ಎಂದರು.