ಕೋಟ: ಬ್ಲಾಕ್ ಮೇಲ್ - ಹಣಕ್ಕೆ ಬೇಡಿಕೆ: ಪ್ರಕರಣ ದಾಖಲು

 


ಕೋಟ: ಸರ್ಕಾರಿ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಲಾಗಿದೆ ಎಂದು ಆರೋಪಿಸಿ ಗುಜರಿ ವ್ಯಾಪಾರಿಯೊಬ್ಬರಿಗೆ ಜೀವ ಬೆದರಿಕೆಯೊಡ್ಡಿ ಹಣಕ್ಕೆ ಬೇಡಿಕೆಯಿಟ್ಟ ಆರೋಪದ ಮೇಲೆ ಕಾಂಗ್ರೆಸ್ ಮುಖಂಡ ಸೇರಿದಂತೆ ಮೂವರ ವಿರುದ್ಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಗಸ್ಟ್ 31ರಂದು ಬೆಳಿಗ್ಗೆ ಸುಮಾರು 11.30ರ ವೇಳೆಗೆ ಎರಡನೇ ಆರೋಪಿ ಸಚಿನ್ ಎಂಬಾತ ದೂರುದಾರರಿಗೆ ಕರೆ ಮಾಡಿ, ನಿಮ್ಮ ಮನೆಯಂಗಳದಲ್ಲಿ ಎರಡು ಚೀಲ ಅಕ್ಕಿ ಇಟ್ಟಿರುವುದಾಗಿ ತಿಳಿಸಿದ್ದಾನೆ. ದೂರುದಾರರು ಮನೆಗೆ ಬಂದಾಗ ಸಚಿನ್ ಆಟೊ ರಿಕ್ಷಾದಲ್ಲಿ ಹಾಗೂ ನಾಗೇಂದ್ರ ಪುತ್ರನ್ ಮತ್ತು ಪ್ರದೀಪ್  ಬೈಕ್‌ನಲ್ಲಿ ಬಂದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ತಾನು ಸಾಮಾಜಿಕ ಕಾರ್ಯಕರ್ತನೆಂದು ಹೇಳಿಕೊಂಡ ನಾಗೇಂದ್ರ ಪುತ್ರನ್, ಅಂಗಳದಲ್ಲಿದ್ದ ಅಕ್ಕಿ ಚೀಲಗಳ ವಿಡಿಯೊ ಮಾಡಿಕೊಂಡು, "ಸರ್ಕಾರದ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿರುವ ಕುರಿತು ದೂರು ನೀಡಿ ಜೈಲಿಗೆ ಕಳುಹಿಸುತ್ತೇನೆ" ಎಂದು ಬೆದರಿಕೆ ಹಾಕಿದ್ದಾನೆ. ಪ್ರಕರಣದಿಂದ ತಪ್ಪಿಸಿಕೊಳ್ಳಲು ₹2 ಲಕ್ಷ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದು, ಅಷ್ಟು ಹಣ ನೀಡಲು ಸಾಧ್ಯವಿಲ್ಲ ಎಂದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.

ಬಳಿಕ ಕನಿಷ್ಠ ₹1 ಲಕ್ಷ ನೀಡಲೇಬೇಕು, ಇಲ್ಲದಿದ್ದರೆ ಜನರನ್ನು ಕರೆಸಿ ಹಲ್ಲೆ ನಡೆಸಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಮಧ್ಯಾಹ್ನ 2.45ರವರೆಗೂ ಸ್ಥಳದಲ್ಲೇ ಪಟ್ಟು ಹಿಡಿದು ಕುಳಿತಿದ್ದ ಎನ್ನಲಾಗಿದೆ. ಈ ವೇಳೆ ಸ್ಥಳಕ್ಕೆ ದೂರುದಾರರ ಮಕ್ಕಳು ಬರುತ್ತಿದ್ದಂತೆ ಆರೋಪಿಗಳು ನಿಂದಿಸಿ ಅಲ್ಲಿಂದ ಪರಾರಿಯಾಗಿದ್ದಾರೆ.

ಘಟನೆ ಸಂಬಂಧ ಸಂತ್ರಸ್ತ ವ್ಯಾಪಾರಿ ನೀಡಿದ ದೂರಿನ ಮೇರೆಗೆ ಕೋಟ ಠಾಣೆಯ ಪೊಲೀಸರು ಜೀವ ಬೆದರಿಕೆ, ಹಣಕ್ಕೆ ಬೇಡಿಕೆ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.