ಕೋಟ: ಮನೆಯ ಅಂಗಳದಲ್ಲಿ ಸರಕಾರದ ಅಕ್ಕಿ ಚೀಲಗಳನ್ನು ಇಟ್ಟಿರುವುದಾಗಿ ಅವಾಚ್ಯ ಶಬ್ದಗಳಿಂದ ಬೈದು, ಕೊಲೆ ಬೆದರಿಕೆ ಹಾಗೂ ಸುಲಿಗೆಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಟ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 137/2026ರಂತೆ BNSನ ಕಲಂ 308(2), 308(4), 329(3), 352, 351(2), 248 ಹಾಗೂ 3(5)ರಡಿ ಪ್ರಕರಣ ದಾಖಲಾಗಿತ್ತು.
ಆರೋಪಿಗಳ ಪತ್ತೆಗಾಗಿ ಉಡುಪಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಬೆಳ್ಳಿಯಪ್ಪ ಕೆ.ಯು. ಹಾಗೂ ಬ್ರಹ್ಮಾವರ ವೃತ್ತ ನಿರೀಕ್ಷಕ ಗೋಪಿಕೃಷ್ಣ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿತು.
ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗೇಂದ್ರ ಪುತ್ರನ್ ಅಲಿಯಾಸ್ ನಾಗೇಂದ್ರ ಕೆ.ಕೆ. (37), ಕೋಟತಟ್ಟು ಗ್ರಾಮದ ಗೊಬ್ಬರಬೆಟ್ಟು ಹಾಗೂ ಪಿ. ಸುಮಂತ್ ಕುಂದರ್ (40), ಪಾರಂಪಳ್ಳಿ ಗ್ರಾಮದ ಪಡುಕೆರೆಯವರನ್ನು ಮೈಸೂರು ಪ್ಯಾಲೇಸ್ ಎದುರಿನ ವಸ್ತು ಪ್ರದರ್ಶನ ಮೈದಾನದ ಬಳಿ ಬಂಧಿಸಲಾಗಿದೆ. ಇಬ್ಬರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಇದೇ ಪ್ರಕರಣದ ಮತ್ತೊಬ್ಬ ಆರೋಪಿ ಸಚಿನ್ ಶ್ರೀಯಾನ್ (32), ಮೂಡುಹಡು ಗ್ರಾಮದವರನ್ನು ಸೆ.1ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
