UPI ಮೂಲಕ ಪಾವತಿಗೆ ಶುಲ್ಕ: ಲೋಕಸಭೆಯಲ್ಲಿ ಮಸೂದೆ ಮಂಡನೆ

 


ನವದೆಹಲಿ: ದೇಶದಲ್ಲಿ ಬಹಳ ಜನಪ್ರಿಯವಾಗಿರುವ ಯುಪಿಐ ಪಾವತಿಗಳಿಗೆ ಎಂಡಿಆರ್‌ ಶುಲ್ಕ ವಿಧಿಸಲು ಅವಕಾಶ ಮಾಡಿಕೊಡುವ ತಿದ್ದುಪಡಿ ಮಸೂದೆಯನ್ನು ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ಮಂಡಿಸಿದೆ.


ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ‘ತೆರಿಗೆ ಹಾಗೂ ಇತರ ಕಾನೂನುಗಳ (ತಿದ್ದುಪಡಿ) ಮಸೂದೆ – 2026’ಅನ್ನು ಲೋಕಸಭೆಯಲ್ಲಿ ಮಂಡಿಸಿದ್ದಾರೆ. ವಿದೇಶಿ ಬಂಡವಾಳವನ್ನು ಹೆಚ್ಚು ಆಕರ್ಷಿಸುವುದು, ದೇಶದಲ್ಲಿ ತಯಾರಿಕಾ ಚಟುವಟಿಕೆಗಳನ್ನು ಉತ್ತೇಜಿಸುವುದು ಈ ಮಸೂದೆಯ ಉದ್ದೇಶ ಎಂದು ಹೇಳಲಾಗಿದೆ.


ಈ ತಿದ್ದುಪಡಿ ಮಸೂದೆಯು ‘ಪಾವತಿಗಳು ಮತ್ತು ಸೆಟಲ್‌ಮೆಂಟ್‌ ವ್ಯವಸ್ಥೆಗಳ ಕಾಯ್ದೆ – 2007’ರ ಸೆಕ್ಷನ್‌ 10(ಎ) ಹಾಗೂ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್‌ 269(ಎಸ್‌ಯು)ನಲ್ಲಿ ಕೆಲವು ಬದಲಾವಣೆಗಳನ್ನು ತರುವ ಉದ್ದೇಶವನ್ನು ಕೂಡ ಹೊಂದಿದೆ. ₹50 ಕೋಟಿಗಿಂತ ಹೆಚ್ಚಿನ ವಹಿವಾಟು ಹೊಂದಿರುವ ಉದ್ದಿಮೆಗಳು ರೂಪೆ ಡೆಬಿಟ್ ಕಾರ್ಡ್ ಹಾಗೂ ಭೀಮ್‌–ಯುಪಿಐ ಕ್ಯೂಆರ್‌ ಕೋಡ್‌ ಮೂಲಕ ಪಾವತಿಗಳನ್ನು ಸ್ವೀಕರಿಸಬೇಕು ಎಂದು ಆದಾಯ ತೆರಿಗೆ ಕಾಯ್ದೆಯ ಈ ಸೆಕ್ಷನ್‌ ಹೇಳುತ್ತದೆ.


ಈಗಿರುವ ನಿಯಮದ ಪ್ರಕಾರ ಸೆಕ್ಷನ್‌ 269(ಎಸ್‌ಯು) ಅಡಿ ಹೇಳಲಾಗಿರುವ ವಿಧಾನದಲ್ಲಿ ಪಾವತಿ ಮಾಡುವವರಿಗೆ (ಅಂದರೆ ಯುಪಿಐ ಕ್ಯೂಆರ್‌ ಕೋಡ್‌) ಎಂಡಿಆರ್ ಶುಲ್ಕ ವಿಧಿಸಲು ಅವಕಾಶ ಇಲ್ಲ. ಆದರೆ ಈಗ ಸಂಬಂಧಪಟ್ಟ ನಿಯಮಗಳಿಗೆ ತಿದ್ದುಪಡಿ ತಂದು, ಯುಪಿಐ ವಹಿವಾಟಿಗೆ ಶುಲ್ಕ ವಿಧಿಸುವ ಅವಕಾಶ ಮುಕ್ತವಾಗಿಸಿಕೊಳ್ಳಲು ಕೇಂದ್ರ ಮುಂದಾಗಿದೆ.


ಈ ಮಸೂದೆಗೆ ಅಂಗೀಕಾರ ದೊರೆತ‍ ಮಾತ್ರಕ್ಕೆ ಯುಪಿಐ ವಹಿವಾಟುಗಳಿಗೆ ಶುಲ್ಕ ವಿಧಿಸುವ ಪದ್ಧತಿ ಜಾರಿಗೆ ಬರಲಿಕ್ಕಿಲ್ಲ. ಆದರೆ ಶುಲ್ಕ ವಿಧಿಸುವುದಕ್ಕೆ ಕಾನೂನಿನ ಆಧಾರವೊಂದು ಸಿಕ್ಕಂತೆ ಆಗುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.


ಪ್ರಸ್ತಾವಿತ ತಿದ್ದುಪ‍ಡಿಯು ಶುಲ್ಕ ವಿಧಿಸಲು ಅವಕಾಶ ಮಾಡಿಕೊಡುತ್ತದೆ, ಅಷ್ಟೇ. ಆದರೆ ಶುಲ್ಕ ವಿಧಿಸಬೇಕು ಎಂಬ ತೀರ್ಮಾನ ಆಗಿಲ್ಲ. ಮುಂದೆ ಒಂದು ಸಂದರ್ಭದಲ್ಲಿ ಎಂಡಿಆರ್‌ ಶುಲ್ಕ ವಿಧಿಸಿದರೂ ಕಡಿಮೆ ಮೊತ್ತದ ವಹಿವಾಟುಗಳಿಗೆ ವಿನಾಯಿತಿ ನೀಡುವ ಸಾಧ್ಯತೆ ಇದೆ ಎಂದು ಮೂಲವೊಂದು ತಿಳಿಸಿದೆ.


ಉದ್ಯಮದ ಅಂದಾಜಿನ ಪ್ರಕಾರ ಯುಪಿಐ ಮೂಲಕ ನಡೆಯುವ ಶೇ 4ರಷ್ಟು ಸಂಖ್ಯೆಯ ವಹಿವಾಟುಗಳು ಮಾತ್ರ ₹2,000ಕ್ಕಿಂತ ಹೆಚ್ಚಿನ ಮೌಲ್ಯದವು. ಆದರೆ ಮೌಲ್ಯದ ಲೆಕ್ಕದಲ್ಲಿ ಈ ವಹಿವಾಟುಗಳ ಪ್ರಮಾಣ ಶೇ 70ರಷ್ಟಾಗುತ್ತದೆ. ಎಂಡಿಆರ್‌ ಶುಲ್ಕವನ್ನು ವಹಿವಾಟಿನ ಮೊತ್ತದ ಆಧಾರದಲ್ಲಿ ಶೇಕಡಾವಾರು ಲೆಕ್ಕದಲ್ಲಿ ವಿಧಿಸಲಾಗುತ್ತದೆಯಾದ ಕಾರಣಕ್ಕೆ ಕೇಂದ್ರವು ₹2,000ಕ್ಕಿಂತ ಹೆಚ್ಚಿನ ಮೊತ್ತದ ವಹಿವಾಟುಗಳಿಗೆ ಮಾತ್ರ ಶುಲ್ಕ ನಿಗದಿ ಮಾಡಬಹುದು ಎನ್ನಲಾಗಿದೆ.