ಉಡುಪಿ: ಮೃತ ವ್ಯಕ್ತಿಯ ಕುಟುಂಬದವರಿಗೆ ಬೆದರಿಸಿ ಹಣ ವಸೂಲಿಗೆ ಯತ್ನ: ಇಬ್ಬರ ಬಂಧನ

 


ಉಡುಪಿ: ಮೃತಪಟ್ಟ ವ್ಯಕ್ತಿಯ ಹೆಸರಿನಲ್ಲಿ ₹5 ಲಕ್ಷ ಬಾಕಿ ಹಣ ನೀಡುವಂತೆ ಕುಟುಂಬದವರಿಗೆ ಬೆದರಿಕೆ ಹಾಕಿ ಹಣ ವಸೂಲಿಗೆ ಯತ್ನಿಸಿದ ಆರೋಪದ ಮೇಲೆ ಇಬ್ಬರನ್ನು ಉಡುಪಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಕುಕ್ಕುಂಜೆ ಸಂತೋಷನಗರ ನಿವಾಸಿ ಸಾಜೀದ್ ಹಾಗೂ ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಕೆಂಪನಳ್ಳಿ ನಿವಾಸಿ ಸೈಯದ್ ಸೈಫ್ ಅಹಮ್ಮದ್ (40) ಎಂದು ಗುರುತಿಸಲಾಗಿದೆ.

ಜುಲೈ 2ರಂದು ದೂರುದಾರರಿಗೆ ವಾಟ್ಸ್‌ಆ್ಯಪ್‌ ಕರೆ ಮಾಡಿದ ವ್ಯಕ್ತಿಯೊಬ್ಬ ಹಿಂದಿ ಭಾಷೆಯಲ್ಲಿ ಮಾತನಾಡಿ, ‘ನಿಮ್ಮ ಮಗ ಅಜಿತ್ ಪಡಿಯಾರ್ ನಮ್ಮೊಂದಿಗೆ ವಜ್ರದ ವ್ಯವಹಾರ ನಡೆಸಿದ್ದು, ₹5 ಲಕ್ಷ ಬಾಕಿ ಉಳಿಸಿಕೊಂಡಿದ್ದಾರೆ. ಹಣ ಪಾವತಿಸಬೇಕು’ ಎಂದು ಒತ್ತಾಯಿಸಿದ್ದಾನೆ. ಮಗ ಅಜಿತ್ ಎಂಟು ವರ್ಷಗಳ ಹಿಂದೆಯೇ ಮೃತಪಟ್ಟಿದ್ದು, ಯಾವುದೇ ವ್ಯವಹಾರದ ಬಗ್ಗೆ ಮಾಹಿತಿ ಇಲ್ಲ ಎಂದು ದೂರುದಾರರು ತಿಳಿಸಿದರೂ ಹಣ ನೀಡುವಂತೆ ಒತ್ತಾಯಿಸಲಾಗಿದೆ.

ಬಳಿಕ ದುಬೈಯಲ್ಲಿದ್ದ ದೂರುದಾರರ ಮತ್ತೊಬ್ಬ ಮಗ ಅಮೀತ್ ಅವರಿಗೂ ವಾಟ್ಸ್‌ಆ್ಯಪ್ ಕರೆ ಮಾಡಿ, ಅಜಿತ್‌ನ ಬಾಕಿ ಹಣ ₹5 ಲಕ್ಷ ನೀಡದಿದ್ದರೆ ಊರಿನಲ್ಲಿರುವ ಅವರ ಪತ್ನಿ ರಕ್ಷಾ ಅವರಿಗೆ ತೊಂದರೆ ನೀಡುವುದಾಗಿ ಬೆದರಿಕೆ ಹಾಕಲಾಗಿದೆ. ಈ ಸಂಬಂಧ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿಗಳ ಪತ್ತೆಗಾಗಿ ಉಡುಪಿ ನಗರ ಠಾಣೆ ಪೊಲೀಸ್ ನಿರೀಕ್ಷಕ ಮಹೇಶ ಪ್ರಸಾದ್ ಪಿ. ಅವರ ಮಾರ್ಗದರ್ಶನದಲ್ಲಿ ತನಿಖಾ ಪಿಎಸ್‌ಐ ರತ್ನಾಕರ ಕೆ. ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ತಂಡವು ಜುಲೈ 20ರಂದು ಸಾಜೀದ್‌ನನ್ನು ಹಾಗೂ ಆ.26ರಂದು ಸೈಯದ್ ಸೈಫ್ ಅಹಮ್ಮದ್‌ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ. ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಸೈಯದ್ ಸೈಫ್ ಅಹಮ್ಮದ್‌ನನ್ನು ಪೊಲೀಸ್ ಅಭಿರಕ್ಷೆಗೆ ಪಡೆದು ತನಿಖೆ ಮುಂದುವರಿಸಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯ್ಕ ಹಾಗೂ ಉಡುಪಿ ಉಪವಿಭಾಗದ ಡಿವೈಎಸ್‌ಪಿ ಬೆಳ್ಳಿಯಪ್ಪ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆದಿದೆ.

ಪಿಎಸ್‌ಐ ರತ್ನಾಕರ ಕೆ., ಸಿಬ್ಬಂದಿಯಾದ ಪ್ರಸನ್ನ, ಜೀವನ್‌ಕುಮಾರ್, ಮಣಿಪಾಲ ಠಾಣೆಯ ಮಲ್ಲಯ್ಯ ಹಿರೇಮಠ, ಹೇಮಂತ್‌ಕುಮಾರ್ ಹಾಗೂ ಉಡುಪಿ ನಗರ ಠಾಣೆಯ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.