ಉಡುಪಿ: ಬ್ಲಾಕ್ ಬಸ್ಟರ್ ಕೆಜಿಎಫ್ ಬಳಿಕ ಯಶ್ ನಿರೀಕ್ಷೆಯ ಟಾಕ್ಸಿಕ್ ಸಿನಿಮಾಕ್ಕಾಗಿ ಉಡುಪಿಯ ಯುವ ಗಾಯಕಿ ಐರಾ ಸಾಹಿತ್ಯ ರಚಿಸಿ, ಹಾಡಿದ ರ‍್ಯಾಪ್ ಹಾಡು ಸಂಚಲನ ಮೂಡಿಸಿದೆ.
ಹಿಸ್ ಔರಾ ಹಿಟ್ಸ್ ಯು..ರ‍್ಯಾಪ್ ಹಾಡನ್ನು ಯಶ್ ಪಾತ್ರದ ಎಂಟ್ರಿಗೆ ಬಳಸಲಾಗಿದೆ. ಚಿತ್ರದುದ್ದಕ್ಕೂ ಓಪ್ರಾ ಸ್ಟೈಲಲ್ಲಿ ಐರಾ ಬ್ಯಾಕ್ ಗ್ರೌಂಡ್ ಸ್ಕೋರ್(ಹಾಡು) ಪ್ರಸ್ತುತಪಡಿಸಿದ್ದಾರೆ. ಅರ್ಜುನ್ ಸರ್ಜಾ ಅವರ ಹಿಟ್ ಸಿನಿಮಾ ಬ್ಲಾಸ್ಟ್ ಗಾಗಿ ಐ ವಾಂಟ್ ಎವ್ವೆರಿಥಿಂಗ್ ಹಾಡನ್ನು ಸ್ವತಃ ಬರೆದು ಐರಾ ಹಾಡಿದ್ದಾರೆ.
ಸಂಗೀತ ನಿರ್ದೇಶಕ ರವಿ ಬಸ್ರೂರು ಜತೆ ಐರಾ ಹಲವು ಚಿತ್ರಗಳಿಗೆ ಹಾಡಿದ್ದಾರೆ.ಸಲಾರ್, ಕಬ್ಜ ಸಿನಿಮಾಗಳಿಗೆ ಹಾಡಿದ ಹಾಡು ಸೂಪರ್ ಹಿಟ್ ಆಗಿವೆ. ಕೆಜಿಎಫ್ ೧ ಚಿತ್ರಕ್ಕಾಗಿ ಐರಾ ಕಂಠದಿಂದ ಜೋಕೆ ನಾನು ಬಳ್ಳಿಯ ಮಿಂಚು..ರ‍್ಯಾಪ್ ಸ್ಟೈಲಿನ ಹಾಡು ಹೊರಹೊಮ್ಮಿತ್ತು, ಹಿಟ್ ಆಗಿತ್ತು. ೩೦ಮಿಲಿಯನ್ ಜನರನ್ನು ತಲುಪಿತ್ತು.
ಆಸ್ಕರ್ ಎವಾರ್ಡ್ ಗೆದ್ದ ಸಂಗೀತ ನಿರ್ದೇಶಕ ಎಂ. ಎಂ. ಕೀರವಾಣಿ ಜತೆ ನಾಲ್ಕು ಭಾಷೆಗೆ (ಥೋಡ ಥೋಡ ದಿಲ್ ಡೋಲಾ)ಧ್ವನಿ ನೀಡಿದ್ದಾರೆ. ಸಲ್ಮಾನ್, ಅಜಯ್‌ದೇವಗನ್ ಸಹಿತ ಹಲವರ ಚಿತ್ರಗಳ ಸೂಪರ್ ಹಿಟ್ ಹಾಡುಗಳಲ್ಲಿ ಐರಾ ಕಂಠ ಸಿರಿಯಿದೆ.
ಚಿರಂಜೀವಿಯವರ ವಿಶ್ವಾಂಭರ ಸಿನಿಮಾದಲ್ಲಿ ಆಲಾಪ, ಶಿವರಾಜ್ ಕುಮಾರ್ ಅವರ ಭೈರತಿ ರಣಗಲ್ ಸಿನಿಮಾದುದ್ದಕ್ಕೂ ಬ್ಯಾಕ್ ಗ್ರೌಂಡ್ ಸ್ಕೋರ್, ಮಲಯಾಳದ ಜೇಕ್ಸ್ ಬಿ. ಜಾಯ್ ಸಂಗೀತ ನಿರ್ದೇಶನದಲ್ಲಿ ಯಕ್ಷಗಾನ ಶೈಲಿಯ ಹಾಡು ಹೊಸತನಕ್ಕೆ ಸಾಕ್ಷಿಯಾಗಿದೆ.
ಕನ್ನಡ, ತೆಲುಗು, ಮಲಯಾಳ, ತಮಿಳು, ಹಿಂದಿ ಸಹಿತ ೫೦ಕ್ಕೂ ಅಧಿಕ ಸಿನಿಮಾಗಳಿಗೆ ಸೀಮಿತ ಅವಧಿಯಲ್ಲಿ ಹಾಡಿರುವ ಐರಾ, ತನ್ನ ಇಂಗ್ಲೀಷ್ ಉಚ್ಛಾರಣೆ ಸುಧಾರಿಸುವ ಹಂತದಲ್ಲಿ ಇಂಗ್ಲೀಷ್ ಸಾಹಿತ್ಯ ಬರವಣಿಗೆ ಸಿದ್ಧಿಸಿಕೊಂಡಿದ್ದಾರೆ.
ಸಾಂಪ್ರದಾಯಿಕ ಹಾಡಿನ ಜತೆಗೆ ಜೆನ್‌ಝಿ ಮನಸ್ಸು ಕದಿಯುವಂತೆ, ಗೆಲ್ಲುವಂತೆ ಹಾಡುವ ಕಲೆಯನ್ನೂ ಐರಾ ಸಿದ್ಧಿಸಿಕೊಂಡಿದ್ದಾರೆ. ಐರಾ ಹಾಡಿನ ೧೪ ಸಿನಿಮಾಗಳು ಪ್ರಗತಿಯಲ್ಲಿವೆ. ಎರಡು ತುಳು ಸಿನಿಮಾಕ್ಕೂ ಹಾಡಿರುವ ಐರಾ ಎಂಜಿಎಂ ಕಾಲೇಜಿನಿಂದ ಪದವಿ ಪಡೆದಿದ್ದಾರೆ.
ವಿಠಲದಾಸ್ ಭಟ್, ಪಂಡಿತ್ ಜಯತೀರ್ಥ ಮೇವುಂಡಿ ಸಂಗೀತ ಗುರುಗಳಾಗಿದ್ದಾರೆ. ಹಿಂದೂಸ್ಥಾನಿಯಲ್ಲಿ ಸಂಗೀತ ವಿದ್ವತ್ ಪೂರೈಸಿದ್ದಾರೆ. ಅಮ್ಮನಿಂದ ದೇವರ ನಾಮ ಕಲಿತಿದ್ದಾರೆ. ಪೂರ್ಣಪ್ರಜ್ಞ ಕಾಲೇಜು ಬಳಿಯ ನಿವಾಸಿ ವೃಜನಾಥ ಆಚಾರ್ಯ-ಚೇತನಾ ಆಚಾರ್ಯ ದಂಪತಿ ಪುತ್ರಿಯಾದ ಐರಾ ರ‍್ಯಾಪ್, ಗಝಲ್, ಓಪ್ರಾವನ್ನು ಕೇಳಿ ಕಲಿತಿದ್ದಾರೆ.

