ಉಡುಪಿ: ಆನ್‌ಲೈನ್‌ನಲ್ಲಿ ಪ್ರಚಾರ ಮಾಡಲಾಗುತ್ತಿದ್ದ ನಕಲಿ ಲಾಟರಿ ವಂಚನೆಗೆ ಬಲಿಯಾಗಿ ಉಡುಪಿಯ ಮಹಿಳೆಯೊಬ್ಬರು 27.06 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಜೂಲಿಯಾನ ವಂಚಕರ ಬಲೆಗೆ ಸಿಕ್ಕ ಮಹಿಳೆ.
ಅವರು ಸಲ್ಲಿಸಿದ ದೂರಿನ ಪ್ರಕಾರ, ಫೇಸ್‌ಬುಕ್‌ನಲ್ಲಿ 'ಕೇರಳ ಮೆಗಾ ಜಾಕ್‌ಪಾಟ್ಸ್ ಎಂಬ ಶೀರ್ಷಿಕೆಯ ಆನ್‌ಲೈನ್ ಲಾಟರಿ ಜಾಹೀರಾತು ಕಂಡುಬಂದಿತ್ತು. ಅದರಲ್ಲಿದ್ದ ಲಿಂಕ್ ಕ್ಲಿಕ್ ಮಾಡಿ ಲಾಟರಿ ಟಿಕೆಟ್ ಖರೀದಿಸಿದ್ದರು.
ನಂತರ ಅಪರಿಚಿತ ವ್ಯಕ್ತಿಗಳು ಆಕೆಯನ್ನು ಸಂಪರ್ಕಿಸಿ ಲಾಟರಿ ಗೆದ್ದಿರುವುದಾಗಿ ತಿಳಿಸಿದರು. ಬಹುಮಾನ ಪಡೆಯಲು ಸಂಸ್ಕರಣೆ, ಸಾಗಾಣೆ, ವಿದೇಶಿ ವಿನಿಮಯ ಮತ್ತು ನಿರ್ವಹಣಾ ವೆಚ್ಚವನ್ನು ಭರಿಸಬೇಕು ಎಂದು ಹಣ ಪಾವತಿಸಲು ಕೇಳಿದರು. ಈ ಸುಳ್ಳುಗಳನ್ನು ನಂಬಿದ ಜೂಲಿಯಾನ ಏಪ್ರಿಲ್ 24ರಿಂದ ಜುಲೈ 31ರವರೆಗೆ ಅಪರಿಚಿತರು ಒದಗಿಸಿದ ಬ್ಯಾಂಕ್ ಖಾತೆಗಳಿಗೆ ಒಟ್ಟು 27,06,862 ರೂಪಾಯಿ ವರ್ಗಾಯಿಸಿದರು.ಲಾಟರಿ ಹಣ ಕೈ ಸೇರದಿದ್ದಾಗ ವಂಚನೆಗೆ ಒಳಗಾದುದು ಅರಿವಾಗಿ ಪೊಲೀಸರ ಮೊರೆ ಹೋಗಿದ್ದಾರೆ. ಸದ್ಯ ಉಡುಪಿ ಸಿಇಎನ್ ಅಪರಾಧ ಪೊಲೀಸ್ ಠಾಣೆಯು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66(ಡಿ) ಹಾಗೂ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 316(2) ಮತ್ತು 318(4) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
