ಉಡುಪಿ: ಉಡುಪಿಯಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ವ್ಯಕ್ತಿಯೊಬ್ಬರಿಗೆ 70 ಲಕ್ಷ ರೂ. ವಂಚನೆ ಮಾಡಿ, ಬಳಿಕ ಅಶ್ಲೀಲ ವಿಡಿಯೋಗಳ ಹೆಸರಿನಲ್ಲಿ ಬ್ಲ್ಯಾಕ್‌ಮೇಲ್ ಹಾಗೂ ಜೀವ ಬೆದರಿಕೆ ಹಾಕಿದ ಆರೋಪದಡಿ ಮಹಿಳೆಯೊಬ್ಬರನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಪಿರ್ಯಾದಿದಾರರಿಗೆ ಆರೋಪಿ ಝೀನತ್ ಇಬ್ರಾಹಿಂ ಪರಿಚಯವಾಗಿ, ಇಬ್ಬರೂ ಸೇರಿ ಉಡುಪಿಯಲ್ಲಿ ಜಂಟಿಯಾಗಿ ರಿಯಲ್ ಎಸ್ಟೇಟ್ ಕಚೇರಿ ಆರಂಭಿಸಿದ್ದರು. ಹೂಡಿಕೆ ಮಾಡುವ ಉದ್ದೇಶದಿಂದ ಪಿರ್ಯಾದಿದಾರರು ಆರೋಪಿಗೆ 70 ಲಕ್ಷ ರೂ. ನೀಡಿದ್ದು, ಜಮೀನು ಖರೀದಿಗೆ ಬಳಸದೇ ಆರೋಪಿ ತನ್ನ ಸ್ವಂತ ಉದ್ದೇಶಗಳಿಗೆ ಹಣ ಬಳಸಿ ವಂಚಿಸಿದ್ದಾಳೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಇದಲ್ಲದೆ, ಕಚೇರಿ ಮುಚ್ಚುವ ವೇಳೆ ದೊರೆತ ಕೆಲವು ರಹಸ್ಯ ಕಡತಗಳು ಹಾಗೂ ಪೆನ್‌ಡ್ರೈವ್‌ನಲ್ಲಿ ಹಲವು ಪ್ರಭಾವಿ ವ್ಯಕ್ತಿಗಳ ಖಾಸಗಿ ಹಾಗೂ ಅಶ್ಲೀಲ ಫೋಟೋ ಮತ್ತು ವಿಡಿಯೋಗಳು ಪತ್ತೆಯಾಗಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪಿರ್ಯಾದಿದಾರರು ಹಣ ವಾಪಸ್ ಕೇಳಿದಾಗ, ಆರೋಪಿ ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟು, ನೀಡದಿದ್ದರೆ ಸುಳ್ಳು ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಲ್ಲದೆ, ತನ್ನ ಬಳಿ ಪಿರ್ಯಾದಿದಾರರ ಅಶ್ಲೀಲ ವಿಡಿಯೋಗಳಿವೆ ಎಂದು ಹೇಳಿ ನಿರಂತರ ಬ್ಲ್ಯಾಕ್‌ಮೇಲ್ ಮಾಡಿದ್ದಾಳೆ ಎನ್ನಲಾಗಿದೆ. ಅಲ್ಲದೆ, ಪತ್ನಿ ಮತ್ತು ಮಕ್ಕಳನ್ನು ಅಪಹರಿಸಿ ಕೊಲೆ ಮಾಡುವುದಾಗಿ ಜೀವ ಬೆದರಿಕೆಯನ್ನೂ ಹಾಕಿದ್ದಾಳೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಸಂಬಂಧ ಸಬೀನಾ ಇಲಿಯಾಸ್ ಸೇರಿದಂತೆ ಇತರರು ಸಹ ಆರೋಪಿಯೊಂದಿಗೆ ಸೇರಿ ಬ್ಲ್ಯಾಕ್‌ಮೇಲ್ ಮೂಲಕ ಅಕ್ರಮ ಹಣ ವಸೂಲಿ ನಡೆಸುತ್ತಿರುವ ಆರೋಪದಡಿ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 79/2026ರಲ್ಲಿ ಬಿಎನ್‌ಎಸ್ ಕಲಂ 308(6), 351(2), 318(2), 3(5) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದ ತನಿಖೆಗಾಗಿ ಪಿಎಸ್‌ಐ ಭರತೇಶ್ ಕಂಕಣವಾಡಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದ್ದು, ಜುಲೈ 2ರಂದು ಪಡುಬಿದ್ರೆಯ ಕಂಚಿನಡ್ಕದಲ್ಲಿ ಆರೋಪಿತೆ ಝೀನತ್ ಅವರನ್ನು ಬಂಧಿಸಲಾಗಿದೆ.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಹೆಚ್ಚಿನ ತನಿಖೆಗಾಗಿ 5 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಈ ಪ್ರಕರಣದಲ್ಲಿ ಇದೇ ರೀತಿಯ ವಂಚನೆ ಅಥವಾ ಬ್ಲ್ಯಾಕ್‌ಮೇಲ್‌ಗೆ ಒಳಗಾಗಿರುವವರು ಇದ್ದರೆ ಉಡುಪಿ ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.
