ಗೃಹಲಕ್ಷ್ಮೀ ಹಣ ಗುಳುಂ ಮಾಡಿದ್ಯಾರು ? ಬ್ಯಾಂಕ್ ಖಾತೆಗಳೇ ಇಲ್ಲದಿರುವ 23262 ಜನರಿಗೆ 46.52 ಕೋಟಿ ರೂ. ಗೃಹಲಕ್ಷ್ಮೀ ಹಣ ವರ್ಗಾವಣೆ !



ಬೆಂಗಳೂರು: ಬ್ಯಾಂಕ್ ಅಕೌಂಟ್ ನಂಬರ್ ಇಲ್ಲದೇ ಇದ್ದರೂ  46.52 ಕೋಟಿ ಹಣ ವರ್ಗಾವಣೆ. ಒಂದೇ ಖಾತೆಯಲ್ಲಿ 19 ಸಾವಿರ ಫಲಾನುಭವಿಗಳು. ಅದಕ್ಕೆ ಕೋಟ್ಯಂತರ ಹಣದ ವರ್ಗಾವಣೆ....

ಇದು ಗೃಹಲಕ್ಷ್ಮಿ ಯೋಜನೆಯ ಚಮತ್ಕಾರ.ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗೆ ಸಂಬಂಧಿಸಿದ ಲೋಪಗಳ ಬಗ್ಗೆ ಮಹಾಲೆಕ್ಕಪರಿಶೋಧಕರು (ಸಿಎಜಿ) ಪರಿಶೀಲನೆ ನಡೆಸಿದ್ದು ಅದರಲ್ಲಿ ಬ್ಯಾಂಕ್ ಖಾತೆಗಳೇ ಇಲ್ಲದಿರುವ ಸುಮಾರು 23262 ಜನರಿಗೆ 46.52 ಕೋಟಿ ರೂ. ಹಣ ವರ್ಗಾವಣೆ ಮಾಡಿರುವುದು ಗೊತ್ತಾಗಿದೆ. ಅಲ್ಲದೆ, 19000 ಫಲಾನುಭವಿಗಳಿಗೆ ಒಂದೇ ಬ್ಯಾಂಕ್ ಖಾತೆ ಜೋಡಣೆಯಾಗಿದ್ದು ಅವರೆಲ್ಲರಿಗೂ ಹಣ ಹೋಗಿರುವುದು ಪತ್ತೆಯಾಗಿದೆ. ಈ ಕುರಿತು ಮಾಹಿತಿ ಮತ್ತು ಸ್ಪಷ್ಟಿಕರಣ ನೀಡುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯನ್ನು ಸಿಎಜಿ ಕೇಳಿದೆ ಎನ್ನಲಾಗಿದೆ.

ಇದಲ್ಲದೆ, ಈಗಾಗಲೇ 75000 ಕೋಟಿಗೂ ಅಧಿಕ ಹಣವನ್ನು ಫಲಾನುಭವಿಗಳ ಖಾತೆಗಳಿಗೆ ವರ್ಗಾವಣೆ ಮಾಡಲಾಗಿರುವ ಈ ಯೋಜನೆಯಲ್ಲಿ ಬ್ಯಾಂಕ್ ಖಾತೆ ಹಾಗೂ ಫಲಾನುಭವಿಗಳ ಮಾಹಿತಿಗೆ ಸಂಬಂಧಿಸಿದ ಗಂಭೀರ ಲೋಪಗಳು ಪತ್ತೆಯಾಗಿವೆ.8995 ಬ್ಯಾಂಕ್ ಖಾತೆಗಳಿಗೆ ಸುಮಾರು ₹1.80 ಕೋಟಿ ಮೊತ್ತವನ್ನು ಪುನರಾವರ್ತಿತವಾಗಿ ಜಮೆ ಮಾಡಲಾಗಿದೆ ಎಂಬ ಅಂಶವು ಸಿಎಜಿ ಡೇಟಾ ಅನಾಲಿಟಿಕ್ಸ್ ವಿಭಾಗ ನಡೆಸಿದ ಆಡಿಟ್‌ನಲ್ಲಿ ಗೊತ್ತಾಗಿದೆ.

ಜತೆಗೆ, 1036308 ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆ ವಿವರಗಳನ್ನು ಬದಲಾಯಿಸಿರುವುದು ಕೂಡ ಗಮನಕ್ಕೆ ಬಂದಿದೆ. ಈ ಲೋಪಗಳು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಡಿಬಿಟಿ ವ್ಯವಸ್ಥೆಯ ಮೂಲಕ ಬ್ಯಾಂಕ್ ಖಾತೆಗೆ ಮಾತ್ರ ಹಣ ಜಮೆ ಆಗಬೇಕಾದ ಸಂದರ್ಭದಲ್ಲಿ, ಖಾತೆ ಇಲ್ಲದವರ ಹೆಸರಿಗೆ ಹಣ ಸಂದಾಯವಾಗಿರುವುದು ಹೇಗೆ ಎಂಬ ಪ್ರಶ್ನೆ ಈಗ ಉದ್ಭವಿಸಿದೆ.

ಈ ಮಧ್ಯೆ, ಸಿಎಜಿ ವರದಿಯ ಸಂಪೂರ್ಣ ಮಾಹಿತಿಯನ್ನು ನೀಡುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸ್ಪಷ್ಟನೆ ಕೇಳಲಾಗಿದೆ.