![]() |
| ಸನತ್ ಆರ್ ಕಾಮತ್ |
ಮಲ್ಪೆ: ಅಕ್ರಮವಾಗಿ ವಾಣಿಜ್ಯ ಅನಿಲ ಸಿಲಿಂಡರ್‌ಗಳನ್ನು ದಾಸ್ತಾನು ಮಾಡಿ ಮಾರಾಟ ಮಾಡುತ್ತಿದ್ದ ಆರೋಪದಡಿ ಮಲ್ಪೆಯ ವ್ಯಕ್ತಿಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಮಲ್ಪೆಯ ಸನತ್ ಆರ್. ಕಾಮತ್ (43) ಬಂಧಿತ ಆರೋಪಿ. ಇವರು ಪರವಾನಿಗೆ ಇಲ್ಲದೆ ಅನಿಲ ಸಿಲಿಂಡರ್‌ಗಳನ್ನು ಸಂಗ್ರಹಿಸಿ ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಆಹಾರ ಇಲಾಖೆ ಅಧಿಕಾರಿಗಳು ಹಾಗೂ ಮಲ್ಪೆ ಪೊಲೀಸರು ಜಂಟಿಯಾಗಿ ದಾಳಿ ನಡೆಸಿದರು.
ಉಡುಪಿ ತಾಲೂಕು ಕಚೇರಿಯ ಆಹಾರ ಶಿರಸ್ತೇದಾರರಾದ ಆಶಾ ಕೆ. ಹಾಗೂ ಆಹಾರ ನಿರೀಕ್ಷಕ ಹಿತೇಶ್ ಯು.ಬಿ. ನೇತೃತ್ವದಲ್ಲಿ, ಮಲ್ಪೆ ಪೊಲೀಸ್ ಠಾಣೆಯ ಪಿಎಸ್‌ಐ ಅನೀಲ್ ಕುಮಾರ್ ಮತ್ತು ಸಿಬ್ಬಂದಿ ತಂಡವು ಕೊಡವೂರು ಗ್ರಾಮದ ಮಲ್ಪೆ ಜಂಕ್ಷನ್‌ನಲ್ಲಿರುವ ಸನತ್ ಕಾಮತ್ ಅವರ ಮನೆಗೆ ದಾಳಿ ನಡೆಸಿತು.
ದಾಳಿಯ ವೇಳೆ 19 ಕೆ.ಜಿ. ಸಾಮರ್ಥ್ಯದ 12 ವಾಣಿಜ್ಯ ಅನಿಲ ಸಿಲಿಂಡರ್‌ಗಳು ಹಾಗೂ 5 ಕೆ.ಜಿ. ಸಾಮರ್ಥ್ಯದ 9 ವಾಣಿಜ್ಯ ಸಿಲಿಂಡರ್‌ಗಳು ದಾಸ್ತಾನು ಇರುವುದು ಪತ್ತೆಯಾಯಿತು. ವಿಚಾರಣೆ ವೇಳೆ ಸಿಲಿಂಡರ್‌ಗಳನ್ನು ಮೀನುಗಾರಿಕಾ ಉದ್ದೇಶಕ್ಕಾಗಿ ಬಳಸುವವರಿಗೆ ಮಾರಾಟ ಮಾಡಲು ಸಂಗ್ರಹಿಸಿಟ್ಟಿರುವುದಾಗಿ ಆರೋಪಿ ತಿಳಿಸಿದ್ದು, ಅಗತ್ಯ ಪರವಾನಿಗೆ ಅಥವಾ ದಾಖಲೆಗಳನ್ನು ಹೊಂದಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪತ್ತೆಯಾದ ಒಟ್ಟು 21 ವಾಣಿಜ್ಯ ಸಿಲಿಂಡರ್‌ಗಳನ್ನು ಆಹಾರ ಇಲಾಖೆ ಅಧಿಕಾರಿಗಳು ಮಹಜರು ಮೂಲಕ ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಅ.ಕ್ರ. 63/2026ರಡಿ ಅಗತ್ಯ ವಸ್ತುಗಳ ಕಾಯ್ದೆ-1955ರ ಕಲಂ 3 ಮತ್ತು 7 ಹಾಗೂ ದ್ರವೀಕೃತ ಪೆಟ್ರೋಲಿಯಂ ಅನಿಲ (ಪೂರೈಕೆ ಮತ್ತು ವಿತರಣಾ ನಿಯಂತ್ರಣ) ಆದೇಶ-2000ರ ಕಲಂ 4 ಮತ್ತು 7ರಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಯಾವುದೇ ಪರವಾನಿಗೆ ಇಲ್ಲದೆ ಅನಿಲ ಸಿಲಿಂಡರ್‌ಗಳನ್ನು ದಾಸ್ತಾನು ಮಾಡಿ ಮಾರಾಟ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
