ರಾಜಾರಾಂ ತಲ್ಲೂರು ಬರಹ:
ಕರ್ನಾಟಕದಲ್ಲಿ ಸುದೀರ್ಘಕಾಲ ಮುಖ್ಯಮಂತ್ರಿ ಆಗಿ ತಮ್ಮ ಛಾಪು ಮೂಡಿಸಿದ ಸಿದ್ಧರಾಮಯ್ಯ ಅವರ ರಾಜಕಾರಣವನ್ನು ಒಟ್ಟಂದದಲ್ಲಿ ವ್ಯಾಲಿಡೇಟ್ ಮಾಡುವುದು ಹೇಗೆ?
ಅನ್ನರಾಮಯ್ಯ, ಭಾಗ್ಯ ರಾಮಯ್ಯ, ಗ್ಯಾರಂಟಿ ರಾಮಯ್ಯ ಎಂಬೆಲ್ಲ ತುರಾಯಿಗಳ ಆಚೆಗೆ ಸಿದ್ಧರಾಮಯ್ಯ ಒಬ್ಬರು “ಮಾಸ್ ಲೀಡರ್” ಅನ್ನಿಸಿಕೊಂಡದ್ದು ಆಕಸ್ಮಿಕ ಅಲ್ಲ.
ಮುಖ್ಯಮಂತ್ರಿ ಆಗುವ ಮುನ್ನ ಸಿದ್ಧರಾಮಯ್ಯ ಅವರು ರಾಜ್ಯ ರಾಜಕಾರಣದಲ್ಲಿ ದೊಡ್ಡ ಸುದ್ದಿ ಮಾಡಿದ್ದು ಎರಡು ಬಾರಿ. ಜನತಾದಳದಿಂದ ಹೊರಬಂದು ಕಾಂಗ್ರೆಸ್ ಜೊತೆ ಗುರುತಿಸಿಕೊಂಡಾಗ ಅವರು ಮೊದಲ ಬಾರಿಗೆ ದೊಡ್ಡ ಸುದ್ದಿಯಾದರು. ಎರಡನೇ ಬಾರಿ ಹಾಗೆ ಸುದ್ದಿ ಆದದ್ದು, ತೊಡೆತಟ್ಟಿ ಬಳ್ಳಾರಿಯತ್ತ ಪಾದಯಾತ್ರೆ ಹೊರಟಾಗ. ಈ ಎರಡು ಡಿಫೈನಿಂಗ್ ಮೊಮೆಂಟ್ಗಳು ಸಿದ್ಧರಾಮಯ್ಯ ಅವರ “ಸಿಗ್ನಲಿಂಗ್ ರಾಜಕಾರಣ ಶೈಲಿಯ” ವಾಟರ್ಶೆಡ್ ಕ್ಷಣಗಳು.
ಜನತಾದಳದ ಮೂಲಕ 2004ರಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ರಾಜ್ಯದ ಉಪಮುಖ್ಯಮಂತ್ರಿಯೂ ಆಗಿದ್ದ ಸಿದ್ಧರಾಮಯ್ಯ, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ದಲಿತರ” ಹೊಸ -ಅಹಿಂದ- ಕಾಂಬಿನೇಷನ್ ಮೂಲಕ ರಾಜ್ಯದ ಪ್ರಭಾವೀ ರಾಜಕೀಯ ಜಾತಿಗಳ (ಒಕ್ಕಲಿಗ-ಲಿಂಗಾಯತ) ಎದುರು ಹೊಸ ಪರ್ಯಾಯ ರಾಜಕೀಯ ಅವಕಾಶಗಳನ್ನು ತೆರೆದರು ಮತ್ತು ಅದರ ಫಲವಾಗಿ, ಜೆಡಿಎಸ್ ಹೈಕಮಾಂಡ್ ಕೋಪಕ್ಕೆ ತುತ್ತಾಗಿ, ಪಕ್ಷದಿಂದ ಹೊರಬಂದರು. 2006ರಲ್ಲಿ ಕಾಂಗ್ರೆಸ್ ಸೇರಿದ ಬಳಿಕ ಸಿದ್ಧರಾಮಯ್ಯ ಅವರು 2010ರಲ್ಲಿ, ಬಳ್ಳಾರಿ ರಿಪಬ್ಲಿಕ್ ವಿರುದ್ಧ ತೊಡೆತಟ್ಟಿ ಪಾದಯಾತ್ರೆ ಆರಂಭಿಸಿದ್ದು, ರಾಜ್ಯದಲ್ಲಿ ಜನಪರ ಹೋರಾಟಕ್ಕೆ ಹೊಸ ದಿಕ್ಕನ್ನು ತೋರಿಸಿತು. ಈ ಎರಡು ಘಟನೆಗಳು ಸಿದ್ಧರಾಮಯ್ಯ ಅವರ ಸೋಷಿಯಲ್ ಇಂಜಿನಿಯರಿಂಗ್ ಕೌಶಲ, ಹೋರಾಟದ ಕೆಚ್ಚುಗಳನ್ನು ಜನಮಾನಸದಲ್ಲಿ ಅಚ್ಚೊತ್ತಿತು. ತಮ್ಮ ಸಂಸದೀಯ ಪಟುತ್ವ ಹಾಗೂ ಭಾಷಣಗಳ ವೇಳೆ ಜನರೊಂದಿಗೆ ಸಂವಾದಿಸಬಲ್ಲ ಸಾಮರ್ಥ್ಯದ ಕಾರಣಕ್ಕಾಗಿ ಅವರೊಬ್ಬ “ಮಾಸ್ ಲೀಡರ್” ಆಗಿ ಹೊರಹೊಮ್ಮುವುದು ಸಾಧ್ಯವಾಯಿತು. ಕಾಂಗ್ರೆಸ್ನಂತಹ ಸಾಂಪ್ರದಾಯಿಕ ರಾಜಕಾರಣವನ್ನು ನೆಚ್ಚಿಕೊಂಡ ಪಕ್ಷ ಕೂಡ ಅವರನ್ನು ತನ್ನೊಳಗೆ ಅರಗಿಸಿಕೊಂಡು, ಮುಖ್ಯಮಂತ್ರಿ “ಮುಖ”ವನ್ನಾಗಿ ಬಿಂಬಿಸುವುದು ಅನಿವಾರ್ಯ ಆಯಿತು.
ಮುಖ್ಯಮಂತ್ರಿ ಆದ ಬಳಿಕ, ಸಿದ್ಧರಾಮಯ್ಯ ಅವರ ಮೊದಲ ಅವಧಿಯಲ್ಲಿ (2013-2018) ಒಂದು ಕುತೂಹಲಕರ ಆಬ್ಸರ್ವೇಷನ್ ಏನೆಂದರೆ, ಅವರ ಆಡಳಿತಾವಧಿ ಮಹತ್ವದ್ದಾಗಿತ್ತು ಎಂದು ಅರಿವಿಗೆ ಬರಲು, ಅವರು ಎರಡನೇ ಬಾರಿಗೆ ಮುಖ್ಯಮಂತ್ರಿ ಆಗುವ ತನಕ ಕಾಯಬೇಕಾಯಿತು. ಎರಡನೇ ಬಾರಿ ಮುಖ್ಯಮಂತ್ರಿ ಆಗುವ ಹೊತ್ತಿಗೆ (2023-2026) ಅವರ ಮೇಲೆ ನಾಡಿನ ಜನತೆಗೆ ಬೆಟ್ಟದಷ್ಟು ನಿರೀಕ್ಷೆಗಳಿದ್ದವು.
ಮೊದಲ ಅವಧಿಯಲ್ಲಿ, ಅನ್ನಭಾಗ್ಯ, ಕ್ಷೀರಭಾಗ್ಯ, ಆರೋಗ್ಯ ಭಾಗ್ಯ, ಇಂದಿರಾ ಕ್ಯಾಂಟೀನ್... ಇತ್ಯಾದಿ ಹೆಸರುಗಳಲ್ಲಿ ಅಹಿಂದ ಸಮುದಾಯಗಳನ್ನು ಗುರಿಯಾಗಿಟ್ಟುಕೊಂಡು ತಂದ ಕಲ್ಯಾಣ ಕಾರ್ಯಕ್ರಮಗಳು ಸಾಕಷ್ಟು ಗೇಲಿಗೆ ಗುರಿಯಾಗಿದ್ದವು. ಆದರೆ, ಅವು 2000ನೇ ಇಸವಿಯಿಂದೀಚೆಗೆ ಪ್ರತಿದಿನವೆಂಬಂತೆ ಹೆಚ್ಚುತ್ತಿರುವ ಆರ್ಥಿಕ ಅಸಮಾನತೆಯ ಪಿಡುಗಿಗೆ ಪ್ರಬಲ ಪ್ರತ್ಯಸ್ತ್ರವೆಂದು ಸಾಬೀತಾದವು. ಆಹಾರ ಭದ್ರತೆಯು ಕಾಯಿದೆಯಾಗಿ ಹೊರಹೊಮ್ಮುವ ಜೊತೆಜೊತೆಗೇ ಅನ್ನಭಾಗ್ಯವೂ ಚಾಲನೆಗೊಂಡಿತ್ತು. ಅದನ್ನು ಸಾರಾಸಗಟು ಗೇಲಿ ಮಾಡಿದವರೇ, ಕೋವಿಡ್ ಕಾಲದ ಬಳಿಕ ಇಂದಿಗೂ, “ಗರೀಬ್ ಕಲ್ಯಾಣ್ ಅನ್ನ ಯೋಜನೆ” ಅಡಿಯಲ್ಲಿ ದೇಶದ 50%ಗೂ ಮಿಕ್ಕಿ ಜನರಿಗೆ ಅನ್ನಭಾಗ್ಯ ನೀಡುತ್ತಿದ್ದಾರೆ.
ಕೋಮುವಾದದ ವಿರುದ್ಧ ತೀರಾ ಅಗತ್ಯವಿದ್ದ, ಸೈದ್ಧಾಂತಿಕ ಸ್ಪಷ್ಟತೆಯ ಪ್ರಖರ ಧ್ವನಿಗಳಲ್ಲಿ ಸಿದ್ಧರಾಮಯ್ಯ ಅವರ ಧ್ವನಿ ಎಷ್ಟು ತೂಕದ್ದಾಗಿತ್ತೆಂದರೆ, ಅವರ ಕಾರಿನ ಮೇಲೆ ಕಾಗೆ ಕೂತದ್ದು, ಅವರು ಏನು ತಿಂದು ಎಲ್ಲಿಗೆ ಹೋದರು ಎಂಬ ಕ್ಷುಲ್ಲಕ ಸಂಗತಿಗಳನ್ನೆಲ್ಲ ರಾಷ್ಟ್ರೀಯ ಸುದ್ದಿ ಮಾಡುವ ಮೂಲಕ, ಖರೀದಿ ಆಗಿರುವ ಮಾಧ್ಯಮಗಳು ಅವರನ್ನು “ಕಾರ್ನರ್” ಮಾಡುವ ಆಟ ಶುರು ಮಾಡಿದ್ದವು. ಹೂಬ್ಲೊ ವಾಚು, ಡಿನೋಟಿಫಿಕೇಷನ್ ಪ್ರಕರಣಗಳು ಮಾತ್ರವಲ್ಲದೇ ಅವರ ಖಾಸಗಿ ಬದುಕಿನಲ್ಲಿ ಅವರ ಪುತ್ರನ ಸಾವನ್ನೂ ಬಿಡದೆ ಸಿದ್ಧರಾಮಯ್ಯ ಅವರನ್ನು ಅವರ ಮೊದಲ ಅವಧಿಯುದ್ದಕ್ಕೂ ಟ್ರೋಲ್ ಮಾಡಲಾಯಿತೇ ಹೊರತು ಆಪಾದನೆಗಳನ್ನೆಲ್ಲ ಉದ್ದೇಶಪೂರ್ವಕವಾಗಿಯೇ ತುದಿ ಮುಟ್ಟಿಸಲಿಲ್ಲ. ಮತ್ತೆ ಮತ್ತೆ ಕೋಮು ರಾಜಕಾರಣವನ್ನು ಮುನ್ನೆಲೆಗೆ ತರಲು ಇನ್ನಿಲ್ಲದ ಪ್ರಯತ್ನ ಮಾಡಿ, ಸಿದ್ಧರಾಮಯ್ಯ ಅವರ ಮೊದಲ ಅವಧಿಯ ಸಾಧನೆಗಳನ್ನೆಲ್ಲ ಮಸುಕು ಮಾಡಲಾಗಿತ್ತು.
2023ರಲ್ಲಿ ಎರಡನೇ ಬಾರಿಗೆ ಸಿದ್ಧರಾಮಯ್ಯ-ಡಿ.ಕೆ. ಶಿವಕುಮಾರ್ ಜೋಡಿ ರಾಜ್ಯದಲ್ಲಿ ಕಾಂಗ್ರೆಸ್ ಗೆಲುವಿಗೆ ಹಾದಿ ತೆರೆಯುವ ವೇಳೆ, ಸಿದ್ಧರಾಮಯ್ಯ ಅವರ ಮೇಲೆ ಜನರ ನಿರೀಕ್ಷೆಗಳು ವಸ್ತುಶಃ ಬೆಟ್ಟದಷ್ಟಿದ್ದವು. ಕೋವಿಡ್ ಕಾಲದಲ್ಲಿ ಅನುಭವಿಸಿದ ಸಂಕಟಗಳಿಗೆ ಶಮನ ಇಲ್ಲದಾಗ, ಅನ್ನಭಾಗ್ಯದ ಸಿದ್ಧರಾಮಯ್ಯ ಮತ್ತೆ ನೆನಪಾಗತೊಡಗಿದ್ದರು. ಆಕಸ್ಮಿಕವೋ ಅಥವಾ ಅಯಾಚಿತವೋ ಆಗಿ ಗ್ಯಾರಂಟಿಗಳ ಬೆನ್ನೇರಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೇರಿದಾಗ, ಸಾರ್ವತ್ರಿಕ ಮೂಲಾದಾಯ (UBI) ಕಲ್ಪನೆಯನ್ನು ಮುಂದಿಟ್ಟುಕೊಂಡು, ಈಗ ಮೂರು ವರ್ಷಗಳ ತನಕವೂ ಪಂಚ ಗ್ಯಾರಂಟಿಗಳನ್ನು ಸಿದ್ಧರಾಮಯ್ಯ ಸರ್ಕಾರ ಬದ್ಧತೆಯಿಂದ ಜಾರಿಗೆ ತಂದಿದೆ. ಅದರ ಫಲಿತಾಂಶಗಳೂ ಆರ್ಥಿಕ ಲೆಕ್ಕಾಚಾರಗಳ ವೇಳೆ ಗೋಚರಿಸತೊಡಗಿವೆ.
ಸಿದ್ಧರಾಮಯ್ಯ ಅವರನ್ನು ನಾಡು ಹೇಗೆ ನೆನಪಿಟ್ಟಕೊಳ್ಳಲಿದೆ ಎಂದರೆ, ಅವರು ನೆಲದ ಧ್ವನಿಗೆ ಕಿವಿಯಾನಿಸಿ ಕೇಳಿ, ಅರ್ಥೈಸಿಕೊಂಡು, ಅದರಂತೆ ಕಾರ್ಯಾಚರಿಸಬಲ್ಲ ಅಪರೂಪದ ಕೌಶಲವಿರುವ ನಾಯಕ. ಅಹಿಂದದ ಪ್ರಸ್ತುತತೆಯಾಗಲೀ, ಅಥವಾ ಸಮಸಮಾಜದ ಬೇಡಿಕೆಯಾಗಲೀ, ಈವತ್ತಿನ ಯಾವುದೇ ಮ್ಯಾನಿಪ್ಯುಲೇಟಿವ್ ರಾಜಕೀಯದ ಭಾಗ ಆಗುವುದು ಸಾಧ್ಯವೇ ಇಲ್ಲ. ಅವು ಹೊರನೋಟಕ್ಕೆ ಲಾಭ ತರದ “ರಿಸ್ಕಿ” ರಾಜಕೀಯ ಪಟ್ಟುಗಳು. ಸಿಗ್ನಲಿಂಗ್ ರಾಜಕಾರಣ ಮಾಡಿದಾಗ ಮಾತ್ರ ಅದರ ಫಲ ಜನರಿಗೆ ತಲುಪಬಲ್ಲುದು. ಕೇವಲ ಸಿಂಬಾಲಿಕ್ ರಾಜಕಾರಣ ಆ ಕೆಲಸ ಮಾಡದು. ಸಿದ್ಧರಾಮಯ್ಯ ಒಂದು ವರ್ಗದ ಜನಮೆಚ್ಚುಗೆಯ ರಾಜಕಾರಣಿ ಆದದ್ದು, ಈ ಸಿಗ್ನಲಿಂಗ್ ರಾಜಕಾರಣದ ಮೂಲಕವೇ.
ಸಮಕಾಲೀನ ರಾಜಕೀಯವನ್ನು ವ್ಯಾಲಿಡೇಟ್ ಮಾಡುವಾಗ, ಈವತ್ತಿನ ರಾಜಕಾರಣ ರೇಜಿಗೆ ಹುಟ್ಟಿಸುವುದು ಸಹಜ. ಸ್ವಜನಪಕ್ಷಪಾತ, ಬ್ರಹ್ಮಾಂಡ ಭ್ರಷ್ಟಾಚಾರ, ಕ್ರಿಮಿನಲ್ ಸಂಚುಕೋರತನ, ಅವಕಾಶವಾದಿತನಗಳೆಲ್ಲ ಒಂದೆಡೆ ಸೇರಿದರೆ ಅದೇ ಈವತ್ತಿನ ರಾಜಕಾರಣ. ಹಾಗಾಗಿ, ರಾಜಕೀಯಸ್ಥರನ್ನು, (ಎಕನಾಮಿಕ್ಸ್ ಭಾಷೆಯಲ್ಲಿ ಹೇಳುವುದಾದರೆ) ಬೇಸ್ ಪ್ರೈಸ್ ಬದಲು ಕರೆಂಟ್ ಪ್ರೈಸ್ನಲ್ಲೇ ವ್ಯಾಲಿಡೇಟ್ ಮಾಡುವುದು ಬಹಳ ಮುಖ್ಯ. ಇದು ಯಾಕೆಂದು ಸ್ವಲ್ಪ ವಿವರಿಸಬೇಕು. ಮನುಷ್ಯ ಒಂದು ಸಮುದಾಯ ಆಗಿ ಬದುಕಲು ಆರಂಭಿಸಿದ ದಿನದಿಂದಲೇ ಸ್ವಜನ ಪಕ್ಷಪಾತ, ಭ್ರಷ್ಟಾಚಾರಗಳು ಜನಸಮುದಾಯಗಳ ಅವಿಚ್ಛಿನ್ನ ಭಾಗ. ಹಾಗಾಗಿ, ಯಾವತ್ತೂ ಅವು ಮಹತ್ವದ ಸಮಸ್ಯೆಗಳು ಎಂದು ಬೇರುಮಟ್ಟದ ರಾಜಕೀಯಕ್ಕೆ ದೇಶದ ಚರಿತ್ರೆಯಲ್ಲಿ ಎಲ್ಲೂ ಅನ್ನಿಸಿದ್ದೇ ಇಲ್ಲ. ಅಕಸ್ಮಾತ್ ಹಾಗನ್ನಿಸಿದ ಸಂದರ್ಭಗಳೆಲ್ಲ ಮ್ಯಾಕ್ರೋ ರಾಜಕೀಯ ತಂತ್ರಗಾರಿಕೆಯ ಮೈಕ್ರೋ ನೆರೇಟಿವ್ಗಳಾಗಿದ್ದವು ಎಂಬುದು, ದೇಶದ ಚರಿತ್ರೆಯನ್ನು ಗಮನಿಸಿದರೆ ಸ್ಪಷ್ಟ. ಈ ಕಾರಣಕ್ಕಾಗಿಯೇ “JCB” ಪಕ್ಷಗಳು ಎಂಬ ದೂರಿನೊಂದಿಗೆ ನಡೆಯುತ್ತಿರುವ ಪರ್ಯಾಯ ರಾಜಕೀಯ ಪ್ರಯತ್ನಗಳ ಕೂಗು ತಳಮಟ್ಟಕ್ಕೆ ತಲುಪುವುದು ಸಾಧ್ಯ ಆಗುತ್ತಿಲ್ಲ. “ಭ್ರಷ್ಟಾಚಾರ” ಎಂಬುದು ಸ್ವತಃ ತಾನು ಆಚರಿಸುವ, ಇನ್ನಿತರರತ್ತ ಬೊಟ್ಟುಮಾಡುವ ಮಧ್ಯಮ ವರ್ಗದ ಸಾಮಾಜಿಕ ರಾಜಕಾರಣದ ಹಳೆಯ ವರಸೆ. (ಹೀಗೆಂದಾಕ್ಷಣ ಇದು ಭ್ರಷ್ಟಾಚಾರ, ಸ್ವಜನಪಕ್ಷಪಾತಗಳ ಸಮರ್ಥನೆ ಅಲ್ಲ. ಅವೆಲ್ಲ ನನ್ನಿಂದ, ನನ್ನ ಮನೆಯಿಂದ ಆರಂಭ ಆಗಬೇಕೇ ಹೊರತು ಸಮಾಜದಿಂದ ಆರಂಭ ಆಗಲಿ, ನನ್ನಲ್ಲಿಗೆ ತಲುಪಲಿ, ಅದಕ್ಕಾಗಿ ಹೋರಾಟ ಎಂದೆಲ್ಲ ಹೊರಡುವ ಪ್ರಯತ್ನಗಳು ನೆಲಕ್ಕೆ ಕಿವಿಯಾನಿಸಿ ಧ್ವನಿ ಕೇಳುವಲ್ಲಿ ಮತ್ತೆ ಮತ್ತೆ ಸೋಲುತ್ತವೆ. ಇವು ಓವರ್ ನೈಟ್ ಕ್ರಾಂತಿಗಳೂ ಅಲ್ಲ. ಒಂದು ಸತತ ಪ್ರಕ್ರಿಯೆ ಆಗಬೇಕು ಎಂಬುದು ನನ್ನ ನಂಬಿಕೆ.) ಈ ವಿಚಾರಗಳನ್ನೆಲ್ಲ ಗಮನದಲ್ಲಿ ಇಟ್ಟುಕೊಂಡು ಲೆಕ್ಕಾಚಾರ ಮಾಡಿದರೆ, ಕರ್ನಾಟಕದ ಇಂದಿನ ಪ್ರಮುಖ ರಾಜಕಾರಣಿಗಳ ಪೈಕಿ ಸಿದ್ಧರಾಮಯ್ಯ ಬಹಳ ಮರ್ಯಾದಸ್ಥ, ಸಜ್ಜನ ಮತ್ತು ರಾಜಕೀಯ-ಸಾಮಾಜಿಕ-ಸಾಂಸ್ಕೃತಿಕ ಸ್ಪಷ್ಟತೆ ಇರುವ ರಾಜಕಾರಣಿ ಎಂದೇ ಇತಿಹಾಸದಲ್ಲಿ ದಾಖಲಾಗಬೇಕು.
ಸಿದ್ಧರಾಮಯ್ಯ ಅವರ ಆಡಳಿತಾವಧಿಯ ಮಿತಿ ಎಂದರೆ, ಅವರ ಮುಖ್ಯಮಂತ್ರಿತ್ವದ ಎರಡನೇ ಅವಧಿಯಲ್ಲಿ ಅವರಿಗೆ ನಿರಾಸಕ್ತಿ ಯೋಗ ಇತ್ತು. ಮೊದಲ ಅವಧಿಯ ಉತ್ಸಾಹ ಇರಲಿಲ್ಲ. ಹಾಗಾಗಿ, ವ್ಯವಸ್ಥೆಯ ಭ್ರಷ್ಟತೆ, ಸ್ವಜನಪಕ್ಷಪಾತ, ರಾಜಕೀಯ ಒಳಜಗಳಗಳೆಲ್ಲ ಮೇಲುಪದರದಲ್ಲಿ ಕಾಣಿಸಿಕೊಳ್ಳತೊಡಗಿದವು. ಇಂತಹ ಎಲ್ಲ ಬೆಳವಣಿಗೆಗಳಿಗೂ ಸಿದ್ಧರಾಮಯ್ಯ ದೃತರಾಷ್ಟ್ರಕುರುಡು ತೋರಿಸತೊಡಗಿದ್ದರು. ಹೀಗೆ ಆಡಳಿತ-ರಾಜಕೀಯದ ಮೇಲೆ ಹಿಡಿತ ತಪ್ಪಿದ ಸಿದ್ಧರಾಮಯ್ಯ ಅವರ ಮೇಲೆ ಮಾಧ್ಯಮಗಳು “ಅಧಿಕಾರ ಹಸ್ತಾಂತರ”ದ ಒತ್ತಡವನ್ನು ಸತತವಾಗಿ ಹಾಕತೊಡಗಿದವು.
ವೈಯಕ್ತಿಕವಾಗಿ ನನಗೆ ಸಿದ್ಧರಾಮಯ್ಯ ಅವರ ಈ ಅವಧಿ ಮೂರು ಕಾರಣಗಳಿಗಾಗಿ ಹಿತಕರ ಆಗಿರಲಿಲ್ಲ. ಮೊದಲನೆಯದಾಗಿ, ಕೋವಿಡ್ ಬಳಿಕದ ಹಠಾತ್ ಸಾವಿನ ಪ್ರಕರಣಗಳ ಕುರಿತು ಮತ್ತೆ ಮತ್ತೆ ಅವರ ಗಮನ ಸೆಳೆದಾಗ, ಅವರು ಜನಸಾಮಾನ್ಯನಾದ ನನಗೆ ವೈಯಕ್ತಿಕವಾಗಿ ಪ್ರತಿಕ್ರಿಯಿಸುವ ಕೃಪೆ ತೋರಿಸಿದ್ದರಾದರೂ, ಅಲ್ಲಿಂದ ಕಾರ್ಯಸಾಧ್ಯ ಯೋಜನೆಯೊಂದಿಗೆ ಮುಂದುವರಿಯಲಿಲ್ಲ. ಅವರು ಕೋವಿಡ್ ಕಾಲದಲ್ಲಿ ರಾಜ್ಯ/ಕೇಂದ್ರ ಸರ್ಕಾರಗಳಿಗೆ ಬರೆದ ಪತ್ರಗಳಲ್ಲಿ ಅವರೇ ಹೇಳಿರುವ ಈ ಮಾಹಿತಿಗಳನ್ನು (ಆಧಾರ: ಅವರ ಬರೆಹಗಳ ಸಮರ ಸೇನಾನಿ ಪುಸ್ತಕ. ಸಂ: ಗಿರೀಶ್ ಕೋಟೆ) ಅವರ ಅಧಿಕಾರದ ಅವಧಿಯಲ್ಲಿ ತುದಿಮುಟ್ಟಿಸುವುದು ಸಾಧ್ಯ ಆಗಿದ್ದರೆ, ಸಾವಿರಾರು ಜೀವಗಳು ಅಕಾರಣ ಸಾವಿನಿಂದ ಬಚಾವಾಗುತ್ತಿದ್ದವೇನೋ. ಅದು ಆಗಲಿಲ್ಲ. ಆ ಬೇಸರ ನನಗೆ ಶಾಶ್ವತವಾಗಿ ಉಳಿಯಲಿದೆ. ಎರಡನೆಯದಾಗಿ, ಕರ್ನಾಟಕ ವಿಧಾನಪರಿಷತ್ತಿನಲ್ಲಿ, ಸಭಾಪತಿ ಪೀಠದ ಮೇಲೆ ನಡೆದ ದಾಳಿಯ ಸಂದರ್ಭದಲ್ಲಿ ಸಂವಿಧಾನದ ಆಶಯಗಳ ರಕ್ಷಣೆಗೆ ಮುಂದಾಗಬೇಕಾದ ಪ್ರಮಾಣದಲ್ಲಿ ಅವರು ಮುಂದಾಗಲಿಲ್ಲ. ಆ ಕುರಿತ ಸದನ ಸಮಿತಿಯ ತನಿಖಾವರದಿ ಇನ್ನೂ ಕೋಲ್ಡ್ ಸ್ಟೋರೇಜಿನಲ್ಲಿದೆ. ತನ್ನ ಗುಡ್ವಿಲ್, ಸಹಾನುಭೂತಿಗಳ ಹೊರತಾಗಿಯೂ ಸಿದ್ಧರಾಮಯ್ಯನವರಿಗೆ ದುಡ್ಡಿನ ರಾಜಕಾರಣದ ಆರ್ಭಟವನ್ನು ತಗ್ಗಿಸುವುದು ಸಾಧ್ಯ ಆಗಲಿಲ್ಲ. ಅದು, ಕರಾವಳಿಯಲ್ಲಿ ಅವರ ಪಕ್ಷದ ಸಂಘಟನೆಯ ಮೇಲೇ ಮಾಡಿರುವ ಪರಿಣಾಮ ದೀರ್ಘಕಾಲಿಕ ಸ್ವರೂಪದ್ದು. ಕರಾವಳಿ ಹೇಳೀ, ಕೇಳೀ ಕೋಮು ರಾಜಕಾರಣದ ಪ್ರಯೋಗಶಾಲೆ. ಮೂರನೆಯದಾಗಿ, ಅವರ ಸುತ್ತ ಎರಡನೇ ಅವಧಿಯಲ್ಲಿ ನೆರೆದ ವಂದಿಮಾಗಧರನ್ನು ಅವರು ಸಹಿಸಿಕೊಂಡ ರೀತಿ.
ಇರಲಿ. ಇಂದಿಗೆ ಸಿದ್ಧರಾಮಯ್ಯ ಅವರ ಮುಖ್ಯಮಂತ್ರಿತ್ವದ ಅವಧಿ ನಡುಹಾದಿಯಲ್ಲೇ ಮುಕ್ತಾಯಗೊಂಡಿದೆ, ಆದರೆ ಅವರು ತಾನು ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯಲಿರುವುದಾಗಿ ಘೋಷಿಸಿಕೊಂಡಿದ್ದಾರೆ. ಮುಂದೇನು ಎಂಬ ಕುತೂಹಲವನ್ನು ಮೂಡಿಸಿದ್ದಾರೆ.
