2006ರಲ್ಲಿ ಕೇರಳದ ಕೋಯಿಕೋಡ್ ನ ಅಬ್ದುಲ್ ರಹೀಂ ಉದ್ಯೋಗದ ನಿಮಿತ್ತ ಸೌದಿ ದೇಶಕ್ಕೆ ತೆರಳುತ್ತಾರೆ. ಸೌದಿಯಲ್ಲಿ ವಾಹನ ಚಾಲಕರಾಗಿ ದುಡಿಯುತ್ತಿದ್ದ ಅಬ್ದುಲ್ ರಹೀಮ್ ಅವರಿಗೆ ಒಂದು ದಿನ ಸಂಕಷ್ಟ ಎದುರಾಗುತ್ತದೆ. ತಾನು ಚಲಾಯಿಸುತ್ತಿದ್ದ ಕಾರಿನಲ್ಲಿ ಪುಟ್ಟ ಬಾಲಕ ಅಕಸ್ಮಾತ್ತಾಗಿ ಸಾವನ್ನಪ್ಪಿದ್ದು ಈ ಸಾವಿಗೆ ಚಾಲಕ ಅಬ್ದುಲ್ ರಹೀಂ ಕಾರಣ ಎಂದು ಅಲ್ಲಿನ ಪೋಲಿಸರು ಪ್ರಕರಣ ದಾಖಲಿಸಿ ಅವರನ್ನು ಬಂಧನಕ್ಕೆ ಒಳಪಡಿಸುತ್ತಾರೆ.
ಬದುಕು ಕಟ್ಟಿಕೊಳ್ಳಲು ಸೌದಿಗೆ ಬಂದಿದ್ದ ಅಬ್ದುಲ್ ರಹೀಂ ಬದುಕೇ ಬರ್ಬಾದ್ ಆಗುವ ಪರಿಸ್ಥಿತಿ ಬಂದೊದಗುತ್ತದೆ. ಬಾಲಕನ ಸಾವಿನ ಪ್ರಕರಣದಿಂದ ಅಬ್ದುಲ್ ರಹೀಂ ಮುಂದೆ 20 ವರ್ಷಗಳ ಕಾಲ ಸೌದಿ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುತ್ತಾರೆ. ಮರಣ ದಂಡನೆ ಶಿಕ್ಷೆಗೆ ಒಳಗಾಗಿ ಬದುಕು ಮುಗಿಯಿತು ಎನ್ನುವಾಗ ಮರಣ ದಂಡನೆ ಗುರಿಯಾದ ಸುದ್ದಿ ತಿಳಿದು ಜಗತ್ತಿನಾದ್ಯಂತ ಹರಡಿಹೋಗಿದ್ದ ಮಲಯಾಳಿಗಳು ಅಬ್ದುಲ್ ರಹೀಂ ಕುಟುಂಬದ ನೋವಿಗೆ ಸ್ಪಂದಿಸುತ್ತಾರೆ.
ಕೆಲವೊಂದು ಇಸ್ಲಾಮಿಕ ರಾಷ್ಟ್ರಗಳಲ್ಲಿ ಮರಣದಂಡನೆ ಶಿಕ್ಷೆಗೆ ಒಳಗಾದ ಅಪರಾಧಿಯು ಶಿಕ್ಷೆಯಿಂದ ಬಚಾವಾಗಲು ಸಂತ್ರಸ್ತ ಕುಟುಂಬಕ್ಕೆ "ದಿಯಾ" ಅಂದರೆ ಬ್ಲಡ್ ಮನಿ ನೀಡಬೇಕು, ಅಂದರೆ ಬೃಹತ್ ಪರಿಹಾರದ ಮೊತ್ತವನ್ನು ನೀಡಬೇಕು. ಬ್ಲಡ್ ಮನಿಯನ್ನು ಪಡೆದ ಸಂತ್ರಸ್ಥರ ಕುಟುಂಬ ಅಪರಾಧಿಯನ್ನು ಕ್ಷಮಿಸಲು ಒಪ್ಪಿದರೆ ಅಪರಾದಿಗೆ ಶಿಕ್ಷೆಯಿಂದ ವಿನಾಯಿತಿ ಪಡೆಯುವ ಭಾಗ್ಯ ದೊರಕುತ್ತದೆ. ಸೌದಿ ದೇಶದ ಕಾನೂನು ನೀಡಿದ ಈ ಅವಕಾಶವನ್ನು ಮಲಯಾಳಿಗಳು ಉಪಯೋಗಿಸಿ ಸುಮಾರು 34 ಕೋಟಿ ರೂಪಾಯಿ ಹಣವನ್ನು ಸಂಗ್ರಹ ಮಾಡುತ್ತಾರೆ. ಕೇರಳದ ಪ್ರಸಿದ್ಧ ಉದ್ಯಮಿ ಬಾಬಿ ಚೆಮ್ಮನ್ನೂರು ಅವರು ಈ ದೇಣಿಗೆ ಸಂಗ್ರಹದ ಅಭಿಯಾನದ ನಾಯಕತ್ವವನ್ನು ವಹಿಸಿಕೊಳ್ಳುತ್ತಾರೆ. ಲಕ್ಷಾಂತರ ಕೇರಳಿಗರ ಮಾನವೀಯತೆ ಮನುಷ್ಯತ್ವ ಸಹೋದರತ್ವದ ಗುಣಗಳಿಂದಾಗಿ 34 ಕೋಟಿ ರೂಪಾಯಿ ಸಂಗ್ರಹವಾಗುತ್ತದೆ, ಬ್ಲಡ್ ಮನಿ ರೂಪದ 34 ಕೋಟಿ ರೂಪಾಯಿ ಸೌದಿ ದೇಶದ ನ್ಯಾಯಾಲಯಕ್ಕೆ ಸಂದಾಯವಾಗುತ್ತದೆ.
ಕಾನೂನಿನ ಪ್ರಕಾರ ಅಬ್ದುಲ್ ರಹೀಂ ಬಿಡುಗಡೆಯಾಗಿ ತಾಯ್ನಾಡು ಭಾರತಕ್ಕೆ ಆಗಮಿಸುತ್ತಾರೆ. ಕೇರಳದ ಕ್ಯಾಲಿಕಟ್ ವಿಮಾನ ನಿಲ್ದಾಣದಲ್ಲಿ ಸಾವಿರಾರು ಜನ ಕೇರಳಿಗರು ಅಬ್ದುಲ್ ರಹೀಂ ಅವರನ್ನು ಸ್ವಾಗತಿಸುತ್ತಾರೆ. ಯಾರದೋ ಮನೆಯ ಮಗನನ್ನು ನಮ್ಮವನೆಂದು ಭಾವಿಸಿ, ಪರಿಹಾರಕ್ಕಾಗಿ ಧನಸಂಗ್ರಹಿಸಿ ನ್ಯಾಯಾಲಯಕ್ಕೆ ಸಲ್ಲಿಸಿ ಆತನ ಬರುವಿಕೆಗಾಗಿ ಕಾದು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಭಾವನಾತ್ಮಕ ದೃಶ್ಯ ಇಂದು ಇಂಟರ್ನೆಟ್ ನಲ್ಲಿ ಹೆಚ್ವು ಗಮನ ಸೆಳೆಯಿತು. ಮಗನ ಬರುವಿಕೆಗಾಗಿ 20 ವರ್ಷದಿಂದ ಮನೆಯಲ್ಲಿ ಶಬರಿಯಂತೆ ಕಾದು ಕುಳಿತಿದ್ದ ಅಬ್ದುಲ್ ರಹೀಂ ತಾಯಿ ಮಗನನ್ನು ಅಪ್ಪಿ ಮುದ್ದಾಡುತ್ತಾರೆ. ಜನರ ಸಕಾಲಿಕೆ ಸ್ಪಂದನೆ ಇಂದು ಅವರಿಗೆ ಪುನರ್ಜನ್ಮವನ್ನೇ ನೀಡಿದೆ.
ಬ್ಲಡ್ ರಿಲೇಶನ್ನೇ ಅಲ್ಲದವರ ಮಾನವೀಯ ಸ್ಪಂದನೆಯಿಂದಾಗಿ ಬ್ಲಡ್ ಮನಿ ಒಗ್ಗೂಡಿ ಒಬ್ಬ ವ್ಯಕ್ತಿಯ ಬದುಕು ಉಳಿಸಿದೆ. 20 ವರ್ಷಗಳ ಕಾಲ ಅನ್ಯಾಯವಾಗಿ ಸೌದಿ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ ಅಬ್ದುಲ್ ರಹೀಮ್ ಅವರ ಮುಂದಿನ ಜೀವನವು ಸಂತಸದಿಂದ ಕೂಡಿರಲಿ.
