ಉಡುಪಿ: ಉಡುಪಿ ಜಿಲ್ಲಾ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ 44 ವರ್ಷದ ಮಹಿಳೆಯ ಗರ್ಭಕೋಶದಲ್ಲಿದ್ದ ಸುಮಾರು 8 ಕೆ.ಜಿ. ತೂಕದ ಫೈಬ್ರಾಯ್ಡ್ ಗಡ್ಡೆಯನ್ನು ಯಶಸ್ವಿ ಶಸ್ತ್ರಚಿಕಿತ್ಸೆಯ ಮೂಲಕ ವೈದ್ಯರ ತಂಡ ತೆರವುಗೊಳಿಸಿದೆ.
ಕಳೆದ ಒಂದು ವರ್ಷದಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮಹಿಳೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರೂ ಆರೋಗ್ಯದಲ್ಲಿ ಸುಧಾರಣೆ ಕಂಡುಬರದ ಹಿನ್ನೆಲೆಯಲ್ಲಿ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಬಂದಿದ್ದರು. ವೈದ್ಯಕೀಯ ತಪಾಸಣೆ ವೇಳೆ ಮಹಿಳೆಯ ಹೊಟ್ಟೆಯು ಗರ್ಭಿಣಿಯ ಹೊಟ್ಟೆಯಂತೆ ಉಬ್ಬಿಕೊಂಡಿರುವುದು ಕಂಡುಬಂದಿದ್ದು, ಬಳಿಕ ಅಲ್ಟ್ರಾಸೌಂಡ್ ಹಾಗೂ ಸಿಟಿ ಸ್ಕ್ಯಾನ್ ಪರೀಕ್ಷೆ ನಡೆಸಿದಾಗ ಗರ್ಭಕೋಶದಲ್ಲಿ ದೊಡ್ಡ ಗಾತ್ರದ ಗಡ್ಡೆ ಇರುವುದು ದೃಢಪಟ್ಟಿದೆ.
ಜಿಲ್ಲಾ ಆಸ್ಪತ್ರೆ ಹಾಗೂ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಜಿಲ್ಲಾ ಸರ್ಜನ್ ಡಾ. ಹೆಚ್. ಅಶೋಕ್ ಅವರ ಸಲಹೆಯಂತೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಸುಮಾರು 8 ಕೆ.ಜಿ. ತೂಕದ ಗಡ್ಡೆಯನ್ನು ಯಶಸ್ವಿಯಾಗಿ ಹೊರತೆಗೆಯಲಾಗಿದೆ. ಶಸ್ತ್ರಚಿಕಿತ್ಸೆಯ ಬಳಿಕ ಮಹಿಳೆ ಚೇತರಿಸಿಕೊಳ್ಳುತ್ತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಸ್ತ್ರೀರೋಗ ತಜ್ಞರಾದ ಡಾ. ಶಶಾಂಕ್ ಕಿಣಿ, ಡಾ. ಜಾಸ್ಮಿನ್, ಡಾ. ಕವಿತಾ ಹಾಗೂ ಡಾ. ಅಮೃತಾಂಶ್ ಅವರ ತಂಡ ಶಸ್ತ್ರಚಿಕಿತ್ಸೆ ನಡೆಸಿದ್ದು, ಅರವಳಿಕೆ ತಜ್ಞರಾದ ಡಾ. ಸೂರ್ಯನಾರಾಯಣ ಮತ್ತು ಡಾ. ರಾಜಗೋಪಾಲ್ ಭಂಡಾರಿ ಸಹಕರಿಸಿದ್ದಾರೆ. ಶುಶ್ರೂಷಾಧಿಕಾರಿ ರಕ್ಷಿತಾ ಹಾಗೂ ಓಟಿ ಸಹಾಯಕಿ ಸಂಗೀತ ಕೂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

