ಉಡುಪಿ: ಕಾಪು ತಾಲೂಕು ಮುದರಂಗಡಿಯ ಸೈಂಟ್ ಕ್ಷೇವಿಯರ್ ಚರ್ಚ್ ಕಾಂಪ್ಲೆಕ್ಸ್‌ನಲ್ಲಿ ಪ್ರಿನ್ಸ್ ಎಂಟರ್‌ಪ್ರೈಸಸ್ ಮಾಲಕ ಡೇವಿಡ್ ಡಿಸೋಜಾ ಅವರನ್ನು ಪಿಸ್ತೂಲ್‌ನಿಂದ ಗುಂಡು ಹಾರಿಸಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬೈಂದೂರು ತಾಲೂಕಿನ ಯಡ್ತರೆ ಗ್ರಾಮದ ಹುದಾರ ಹೌಸ್, ಬಾಳಿಹಿತ್ಲು ನಿವಾಸಿ ಲೋಕೇಶ್ ತೇಜ ಕೊಠಾರಿ (42) ಬಂಧಿತ ಆರೋಪಿ.
ಈ ಪ್ರಕರಣದಲ್ಲಿ ಈಗಾಗಲೇ ನೇರವಾಗಿ ಭಾಗಿಯಾಗಿದ್ದ ಆರೋಪಿಗಳಾದ ಅನ್ಮೋಲ್ ರಸ್ತೋಗಿ ಹಾಗೂ ಜಿಯಾಹುಲ್ ವಾಜುಲ್ ಶೇಖ್ @ ದೀಪಕ್ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಅಲ್ಲದೆ, ಕೊಲೆ ಕೃತ್ಯಕ್ಕೆ ಅಪರಾಧಿಕ ಒಳಸಂಚು ನಡೆಸಿ ಹಣಕಾಸು ಪೂರೈಕೆ ಮಾಡಿದ ಆರೋಪದ ಮೇಲೆ ಮೊಹಮ್ಮದ್ ಇರ್ಷಾದ್, ಚಿರಾಗ್ ಪೂಜಾರಿ, ಸದಾನಂದ ದೇವಾಡಿಗ ಹಾಗೂ ಕಿಶೋರ್ ರಾಮ ಪೂಜಾರಿ ಅವರನ್ನು ಬಂಧಿಸಲಾಗಿತ್ತು.
ಪ್ರಕರಣದ ಮೊದಲ ಆರೋಪಿ ರಾಜು ಬೈಂದೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಸರ್ಕಾರಿ ನೌಕರರ ಮೇಲಿನ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.
ಮೋಟಾರ್ ಸೈಕಲ್ ಒದಗಿಸಿದ್ದ ಆರೋಪ
ಲೋಕೇಶ್ ತೇಜ ಕೊಠಾರಿ ಈ ಹಿಂದೆ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಪ್ರಕರಣದ ಆರೋಪಿ ಕಿಶೋರ್ ರಾಮ ಪೂಜಾರಿಯ ಪರಿಚಯವಾಗಿ ಸ್ನೇಹ ಬೆಳೆದಿತ್ತು ಎನ್ನಲಾಗಿದೆ. ಕೊಲೆ ಕೃತ್ಯಕ್ಕೆ ಸಂಬಂಧಿಸಿದಂತೆ ಅನ್ಮೋಲ್ ರಸ್ತೋಗಿ ಹಾಗೂ ರಾಜು ಅವರಿಗೆ ಮೋಟಾರ್ ಸೈಕಲ್‌ಗಳನ್ನು ಒದಗಿಸಿ, ಇತರ ಆರೋಪಿಗಳೊಂದಿಗೆ ಸೇರಿ ಅಪರಾಧಿಕ ಒಳಸಂಚು ರೂಪಿಸಿ ಕೃತ್ಯದಲ್ಲಿ ಭಾಗಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳ ಪತ್ತೆ ಕಾರ್ಯಾಚರಣೆಯಲ್ಲಿ ವಿಶೇಷ ಕರ್ತವ್ಯದಲ್ಲಿದ್ದ ಕಾರ್ಕಳ–ಪಡುಬಿದ್ರೆ ಪೊಲೀಸರು ಲೋಕೇಶ್ ತೇಜ ಕೊಠಾರಿಯನ್ನು ಬೈಂದೂರಿನ ಯಡ್ತರೆಯಲ್ಲಿ ವಶಕ್ಕೆ ಪಡೆದು ಪ್ರಕರಣದ ತನಿಖಾಧಿಕಾರಿಯವರ ಮುಂದೆ ಹಾಜರುಪಡಿಸಿದ್ದರು. ಬಳಿಕ ಆಗಸ್ಟ್ 21ರಂದು ಆತನನ್ನು ಅಧಿಕೃತವಾಗಿ ಬಂಧಿಸಲಾಗಿದೆ.
ಆರೋಪಿಯಿಂದ ಕೃತ್ಯಕ್ಕೆ ಬಳಸಿದ್ದ ಮೊಬೈಲ್ ಫೋನ್‌ಗಳು ಹಾಗೂ ಮೋಟಾರ್ ಸೈಕಲ್‌ನ ಇಂಜಿನ್ ಮತ್ತು ಚಾಸೀಸ್ ನಂಬರ್‌ಗಳನ್ನು ಅಳಿಸಲು ಬಳಸಿದ್ದ ಯಂತ್ರವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
