ಮೊಳಹಳ್ಳಿಯಲ್ಲಿ ಯುವ ಕೃಷಿಕನ ನೈಜ ಪರಿಸರ ಪ್ರೇಮ: ಪ್ರಾಣಿ ಪಕ್ಷಿಗಳಿಗೆ ದಾಹ ತಣಿಸಲು ನೀರಿನ ತೊಟ್ಟಿ ಅನಾವರಣ



ಕುಂದಾಪುರ : ಕರಾವಳಿಯಲ್ಲಿ ಬೇಸಗೆ ಝಳ ತೀವ್ರವಾಗಿ ಹೆಚ್ಚುತ್ತಿರುವಂತೆಯೇ ಪ್ರಾಣಿ, ಪಕ್ಷಿಗಳು ಕುಡಿಯುವ ನೀರಿಗಾಗಿ ಪರಿತಪಿಸುತ್ತಿರುವುದನ್ನು ಮನಗಂಡ ಕುಂದಾಪುರ ತಾಲೂಕಿನ ಮೊಳಹಳ್ಳಿಯ ಪ್ರಗತಿಪರ ಕೃಷಿಕ ಪ್ರವೀಣ್ ಹೆಬ್ಗೋಳಿ ಅವರು ತಮ್ಮ ಮನೆ ಸನಿಹದ ಮೀಸಲು ಅರಣ್ಯ ಪ್ರದೇಶದಲ್ಲಿ ಎರಡು ನೀರಿನ ತೊಟ್ಟಿಗಳನ್ನು ನಿರ್ಮಿಸಿ ನೈಜ ಪರಿಸರ ಪ್ರೀತಿಯನ್ನು ಮೆರೆದಿದ್ದಾರೆ.

ಪ್ರವೀಣ್ ಹೆಬ್ಗೋಳಿ ಅವರು ತಮ್ಮದೇ ಆದ ` ಹೆಬ್ಗೋಳಿ ಕುಷ್ಟ ಅಗ್ರಿಕಲ್ಚರಲ್ ಕಂಪೆನಿ ' ವತಿಯಿಂದ ಈ ಕೊಡುಗೆಯನ್ನು ಪ್ರಕೃತಿಗೆ ಸಮರ್ಪಿಸಿದ್ದಾರೆ.



ಮಂಗಳವಾರ ಶಿರಿಯಾರ ಹೆದ್ದಾರಿ ಮಠದ ಶ್ರೀ ಗುರುಮೂರ್ತಿ ಅಡಿಗ ಅವರು ಈ ನೀರಿನ ತೊಟ್ಟಿಗಳನ್ನು ಅನಾವರಣಗೊಳಿಸಿ ಎಚ್‌ಕೆಎಸಿ ಕಂಪೆನಿಯ ಪರಿಸರ ಪ್ರೇಮವನ್ನು ಶ್ಲಾಘಿಸಿದರು. ಕಡು ಬೇಸಗೆಯಲ್ಲಿ ನೀರಿನ ಮೂಲಗಳೆಲ್ಲಾ ಬತ್ತಿಹೋಗಿ ಕಂಗಲಾದ ಕಾಡು ಪ್ರಾಣಿಗಳು, ಪಕ್ಷಿಗಳು ನೀರಿಗಾಗಿ ಮಾನವನ ವಾಸಸ್ಥಳದತ್ತ ಮುಖ ಮಾಡುತ್ತವೆ. ಇಂತಹ ಸಂದರ್ಭದಲ್ಲಿ ಅವುಗಳ ಜೀವಕ್ಕೂ ಅಪಾಯವಿದೆ. ಕಾಡಿನಲ್ಲಿಯೇ ಕೃತಕ ನೀರಿನ ಮೂಲಗಳನ್ನು ನಿರ್ಮಿಸಿದರೆ, ಇಂತಹ ಅನಾಹುತಗಳನ್ನು ತಪ್ಪಿಸಬಹುದು. ಈ ನಿಟ್ಟಿನಲ್ಲಿ ನೀರಿನ ತೊಟ್ಟಿಗಳನ್ನು ನಿರ್ಮಿಸಿ ನೈಜ ಪರಿಸರ ಪ್ರೇಮವನ್ನು ಮೆರೆದ ಕೃಷಿಕ ಪ್ರವೀಣ್ ಹೆಬ್ಗೋಳಿ ಅವರ ಈ ಪ್ರಯತ್ನ ಇತರರಿಗೆ ಮಾದರಿಯಾಗಿದೆ ಎಂದರು.

ಕಾರ್ಯಕ್ರಮದ ರೂವಾರಿ ಪ್ರವೀಣ್ ಹೆಬ್ಗೋಳಿ ಪ್ರಾಸ್ತಾವಿಕ ಮಾತುಗಳನ್ನಾಡಿ, ಮೊಳಹಳ್ಳಿಯ ಈ ಪ್ರದೇಶದಲ್ಲಿ ಸುಮಾರು 600 ಎಕರೆಯಷ್ಟು ಮೀಸಲು ಅರಣ್ಯವಿದೆ. ಎಲ್ಲಿಯೂ ನೀರಿನ ಮೂಲಗಳಿಲ್ಲ. ಈ ದೃಷ್ಟಿಯಿಂದ ಈ ನೀರಿನ ತೊಟ್ಟಿಯನ್ನು ನಿರ್ಮಿಸಿದ್ದೇನೆ. ಸುಮಾರು 500ಲೀ.ನಷ್ಟು ನೀರು ಇದರಲ್ಲಿ ತುಂಬುತ್ತದೆ. ಇದರಿಂದ ಸಾಕಷ್ಟು ಕಾಡು ಪ್ರಾಣಿಗಳಿಗೆ ನೀರಿನ ದಾಹ ನೀಗಬಹುದು ಎಂದರು.

ಕೃಷಿಕ ಪ್ರವೀಣ್ ಹೆಬ್ಗೋಳಿ ಅವರು ತಮ್ಮ ಮನೆ ಪರಿಸರದ ಸರಕಾರಿ ಕೆರೆಯೊಂದನ್ನು ತಮ್ಮದೇ ಖರ್ಚಿನಲ್ಲಿ ಅಭಿವೃದ್ಧಿ ಪಡಿಸಿ ಪ್ರಾಣಿ ಪಕ್ಷಿಗಳಿಗೆ ಅನುಕೂಲ ಪಡಿಸಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಈ ಸಂದರ್ಭದಲ್ಲಿ ಶಂಕರನಾರಾಯಣ ಸರಕಾರಿ ಕಾಲೇಜಿನ ಪ್ರಾಂಶುಪಾಲ ವೆಂಕಟರಮಣ ಭಟ್, ಪ್ರಗತಿಪರ ಕೃಷಿಕ ರಾಜೇಂದ್ರ ಬೆಚ್ಚಳ್ಳಿ, ಮೊಳಹಳ್ಳಿ ಘಟಕದ ಉಪವಲಯ ಅರಣ್ಯಾಧಿಕಾರಿ ಮಂಜುನಾಥ ಎಸ್., ವಕೀಲ ಚಂದ್ರ ಪೂಜಾರಿ ಕೋಟೇಶ್ವರ ಉಪಸ್ಥಿತರಿದ್ದರು.