ಗುಡ್ಡೆಯಂಗಡಿಯಲ್ಲಿ SKF ಇಂಡಸ್ಟ್ರಿಯಲ್ ಟ್ರೈನಿಂಗ್ ಸೆಂಟರ್‌ ಉದ್ಘಾಟನೆ



ಕುಂದಾಪುರ ತಾಲೂಕಿನ ಯಡಾಡಿ-ಮತ್ಯಾಡಿ ಸಮೀಪದ ಗುಡ್ಡೆಯಂಗಡಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ SKF ಇಂಡಸ್ಟ್ರಿಯಲ್ ಟ್ರೈನಿಂಗ್ ಸೆಂಟರ್‌ನ ಉದ್ಘಾಟನಾ ಸಮಾರಂಭವು ಸಂಸ್ಥೆಯ ಕ್ಯಾಂಪಸ್ ನಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಮೂಡಬಿದಿರೆಯ ಆಳ್ವಾಸ್ ಎಜುಕೇಶನ್ ಫೌಂಡೇಶನ್ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ,ನಾನು ಮತ್ತು  SKF ಎಲಿಕ್ಸರ್ ಇಂಡಿಯಾ ಪ್ರೈ. ಲಿ. ಚೇರ್ಮನ್ ಡಾ. ಜಿ. ರಾಮಕೃಷ್ಣ ಆಚಾರ್ ಬದುಕಿನಲ್ಲಿ ಬಹಳ ಕಷ್ಟಪಟ್ಟು ಮೇಲೆ ಬಂದವರು.ದೇಶ ವಿದೇಶಗಳಲ್ಲಿ ಅವರು ತಮ್ಮ ಸಂಸ್ಥೆ ಮೂಲಕ ಸಾವಿರಾರು ಮಂದಿಗೆ ಉದ್ಯೋಗ ನೀಡಿದ್ದಾರೆ.ಇದೀಗ ಊರಿನ ಯುವಕರಿಗೆ skill based ವಿದ್ಯಾಭ್ಯಾಸ ಕೊಟ್ಟು ಅವರದ್ದೇ ಸಂಸ್ಥೆಯಲ್ಲಿ ಉದ್ಯೋಗ ನೀಡಲು ಮುಂದಾಗಿದ್ದಾರೆ.ಈ ಮೂಲಕ ಹುಟ್ಟೂರಿಗೆ ಕೊಡುಗೆ ನೀಡಲು ಮುಂದಾಗಿದ್ದಾರೆ. ಹುಟ್ಟೂರಿಗೆ ಇದಕ್ಕಿಂತ ಹೆಚ್ಚು ಕೊಡುಗೆ ನೀಡಲು ಸಾಧ್ಯವಿಲ್ಲ.ಸುಮಾರು 23 ದೇಶಗಳಲ್ಲಿ ಅವರು ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ.ಅವರ ಸಂಸ್ಥೆ ಜಗದಗಲ ಬೆಳೆಯಲಿ ಎಂದು ಶುಭಹಾರೈಸಿದರು. 



ಚೇರ್ಮನ್ ಡಾ. ಜಿ. ರಾಮಕೃಷ್ಣ ಆಚಾರ್ ಮಾತನಾಡಿ , ಎಸೆಸೆಲ್ಸಿ ಮತ್ತು ಪಿಯುಸಿ ಫೇಲಾದ ಮಕ್ಕಳಿಗೆ ನಾವು ಇಲ್ಲಿ ತರಬೇತಿ ನೀಡಿ ಉದ್ಯೋಗ ನೀಡುತ್ತೇವೆ.ನಾನು ಬಹಳ ಕಷ್ಟಪಟ್ಟು ಜೀವನದಲ್ಲಿ ಮುಂದೆ ಬಂದವನು.ಹಾಗಾಗಿ ಇಲ್ಲಿ ಯುವಕರಿಗೆ ಉಚಿತವಾಗಿ ತರಬೇತಿ ನೀಡಿ ಅವರಿಗೆ ನಮ್ಮಲ್ಲೇ ಉದ್ಯೋಗ ಕೊಡುತ್ತೇವೆ ಎಂದರು.

ಮುಖ್ಯ ಅತಿಥಿಗಳಾಗಿ ಕುಂದಾಪುರ ಶಾಸಕ  ಕಿರಣ್ ಕುಮಾರ್ ಕೊಡ್ಗಿ, ಉದ್ಯಮಿ ಎಂ. ದಿನೇಶ್ ಹೆಗ್ಡೆ ಮೊಳಹಳ್ಳಿ, ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ ಕಾರ್ಕಳದ ಚೇರ್ಮನ್ ಡಾ. ಸುಧಾಕರ್ ಶೆಟ್ಟಿ, ಮಂಗಳೂರಿನ ಲೆಕ್ಕ ಪರಿಶೋಧಕ CA ಎಸ್.ಎಸ್. ನಾಯಕ್, ಯಡಾಡಿ-ಮತ್ಯಾಡಿ ಪ್ರಥಮ ದರ್ಜೆ ಗುತ್ತಿಗೆದಾರ ಬಿ. ಅರುಣ್ ಕುಮಾರ್ ಹೆಗ್ಡೆ, ಮೊಳಹಳ್ಳಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿ ಹಾಗೂ ಸುಜ್ಞಾನ ಎಜುಕೇಶನ್ ಟ್ರಸ್ಟ್ ಕುಂದಾಪುರದ ಚೇರ್ಮನ್ ಡಾ. ರಮೇಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಉಚಿತ ತರಬೇತಿ – ದಾಖಲಾತಿ ಆರಂಭ

ಕುಂದಾಪುರ ತಾಲೂಕಿನ ಗುಡ್ಡೆಯಂಗಡಿ ಪ್ರದೇಶದಲ್ಲಿರುವ “SKF ಇಂಡಸ್ಟ್ರಿಯಲ್ ಟ್ರೈನಿಂಗ್ ಸೆಂಟರ್”ನಲ್ಲಿ 2026-27ನೇ ಸಾಲಿನ ಪ್ರವೇಶ ಪ್ರಕ್ರಿಯೆ ಆರಂಭಗೊಂಡಿದೆ. ಡಾ. ಜಿ. ರಾಮಕೃಷ್ಣ ಆಚಾರ ಚಾರಿಟೇಬಲ್ ಟ್ರಸ್ಟ್ ಹಾಗೂ SKF Elixer India Pvt. Ltd ವತಿಯಿಂದ ಈ ತರಬೇತಿ ಕೇಂದ್ರವನ್ನು ನಿರ್ವಹಿಸಲಾಗುತ್ತಿದೆ.

ಕೈಗಾರಿಕಾ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳನ್ನು ಗಮನದಲ್ಲಿಟ್ಟುಕೊಂಡು ವಿದ್ಯಾರ್ಥಿಗಳಿಗೆ ಉಚಿತ ತಾಂತ್ರಿಕ ತರಬೇತಿ ನೀಡುವ ಉದ್ದೇಶದಿಂದ ವಿವಿಧ ವೃತ್ತಿಪರ ಕೋರ್ಸ್‌ಗಳನ್ನು ಆರಂಭಿಸಲಾಗಿದೆ.

ಕೇಂದ್ರದಲ್ಲಿ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್‌, ಮೆಕ್ಯಾನಿಕ್ – ರೆಫ್ರಿಜರೇಷನ್, ಎಸಿ ಮತ್ತು ಪ್ಲಂಬಿಂಗ್‌ ಸೇರಿದಂತೆ ಹಲವು ತಾಂತ್ರಿಕ ಕೋರ್ಸ್‌ಗಳಿಗೆ ತರಬೇತಿ ನೀಡಲಾಗುತ್ತದೆ. ಜೊತೆಗೆ ಫ್ಯಾಷನ್ ಡಿಸೈನ್ ಕೋರ್ಸ್ ಕೂಡ ಲಭ್ಯವಿದೆ.

ಪ್ರತಿ ಬ್ಯಾಚ್‌ಗೆ 20 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ತರಬೇತಿ ಅವಧಿ ಒಂದು ವರ್ಷವಾಗಿರುತ್ತದೆ. ಫ್ಯಾಷನ್ ಡಿಸೈನ್ ಕೋರ್ಸ್‌ಗೆ ಆರು ತಿಂಗಳ ಅವಧಿ ನಿಗದಿಪಡಿಸಲಾಗಿದೆ. ತರಬೇತಿಯ ಜೊತೆಗೆ ಇಂಟರ್ನ್‌ಶಿಪ್ ಹಾಗೂ ಉದ್ಯೋಗ ಮಾರ್ಗದರ್ಶನ ವ್ಯವಸ್ಥೆಯೂ ಕಲ್ಪಿಸಲಾಗಿದೆ.

SSLC ಪಾಸ್ ಅಥವಾ ಫೇಲ್ ಆದವರು, PUC ಹಾಗೂ ಪದವೀಧರರು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ 91874 92550 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.