ದಾವಣಗೆರೆ: ಅಲ್ಪಸಂಖ್ಯಾತ ಬಂಡಾಯದ ಕಾರಣದಿಂದ ರಾಜ್ಯದಲ್ಲಿ ಅತ್ಯಂತ ಕುತೂಹಲಕ್ಕೆ ಕಾರಣವಾಗಿದ್ದ ದಾವಣಗೆರೆ ದಕ್ಷಿಣ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಪ್ರಯಾಸದ ವಿಜಯ ಸಾಧಿಸಿದ್ದಾರೆ.
ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾಗಿದ್ದ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆದಿತ್ತು. ಅಲ್ಪಸಂಖ್ಯಾತ ನಾಯಕರ ವಿರೋಧದ ನಡುವೆಯೂ ಕಾಂಗ್ರೆಸ್ ಶಾಮನೂರು ಕುಟುಂಬದ ಸಮರ್ಥ್ ಗೆ ಟಿಕೆಟ್ ನೀಡಿತ್ತು. ಇದುವರೆಗೂ ಈ ಕ್ಷೇತ್ರದಲ್ಲಿ ಜಯ ಕಾಣದ ಬಿಜೆಪಿ ಈ ಬಾರಿ ಶ್ರೀನಿವಾಸ್ ದಾಸ್ ಕರಿಯಪ್ಪಗೆ ಟಿಕೆಟ್ ನೀಡಿತ್ತು.
20ನೇ ಸುತ್ತಿನ ಎಣಿಕೆ ಬಳಿಕ ಸಮರ್ಥ್ ಶಾಮನೂರು 67,576 ಮತ ಪಡೆದಿದ್ದರೆ, ಶ್ರೀನಿವಾಸ್ ದಾಸ್ ಕರಿಯಪ್ಪ 62,609 ಮತಗಳನ್ನು ಪಡೆದಿದ್ದಾರೆ. ತಾಂತ್ರಿಕ ಕಾರಣದಿಂದ ಓಪನ್ ಆಗದ ಮೂರು ಇವಿಎಂ ಯಂತ್ರಗಳಲ್ಲಿನ ಮತಗಳು ಹೊರತುಪಡಿಸಿ, ಕಾಂಗ್ರೆಸ್ ಗೆ 4967 ಮತಗಳ ಅಂತರದ ಗೆಲುವು ಲಭಿಸಿದೆ.
ತಾಂತ್ರಿಕ ತೊಂದರೆ ಕಾಣಿಸಿಕೊಂಡಿರುವ ಇವಿಎಂಗಳ ಬದಲಿಗೆ ವಿವಿ ಪ್ಯಾಟ್ ಮತಗಳ ಎಣಿಕೆಗೆ ಆರಂಭವಾಗಿದ್ದು ಈ ಮತ ಎಣಿಕೆ ಬಳಿಕವೇ ಕಾಂಗ್ರೆಸ್ ಗೆಲುವಿನ ಅಂತರದ ನಿಖರ ಸಂಖ್ಯೆ ತಿಳಿಯಲಿದೆ.
