ಕೊಲ್ಕತ್ತಾ: ಪಶ್ಚಿಮ ಬಂಗಾಳದ (West Bengal) ಕೊಲ್ಕತ್ತಾ ಇಂದು ಕೇಸರಿಮಯವಾಗಿದೆ. ರಾಜ್ಯದಲ್ಲಿ ಮೊದಲ ಬಾರಿಗೆ ಬಿಜೆಪಿ ಸರ್ಕಾರ ರಚನೆಯಾಗಿದೆ. ಹೀಗಾಗಿ, ಪ್ರಧಾನಿ ನರೇಂದ್ರ ಮೋದಿಯಿಂದ ಹಿಡಿದು ವಿವಿಧ ರಾಜ್ಯಗಳ ಬಿಜೆಪಿ ಮುಖ್ಯಮಂತ್ರಿಗಳವರೆಗೆ ಅನೇಕ ನಾಯಕರು ಕೊಲ್ಕತ್ತಾಕ್ಕೆ ಆಗಮಿಸಿದ್ದಾರೆ. ಇದೀಗ ಬಿಜೆಪಿ ಹಿರಿಯ ನಾಯಕರ ಹಾಗೂ ಬೆಂಬಲಿಗರ ಸಮ್ಮುಖದಲ್ಲಿ ಸುವೇಂದು ಅಧಿಕಾರಿ (Suvendu Adhikari) ಪಶ್ಚಿಮ ಬಂಗಾಳದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಈ ಅದ್ದೂರಿ ಸಮಾರಂಭವು ಕೋಲ್ಕತ್ತಾದ ಬ್ರಿಗೇಡ್ ಪರೇಡ್ ಮೈದಾನದಲ್ಲಿ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು NDAಯ ಹಲವಾರು ಹಿರಿಯ ನಾಯಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ನೊಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ ಟ್ಯಾಗೋರ್ ಅವರ ಜನ್ಮ ದಿನಾಚರಣೆಯಾದ ಇಂದೇ ನೂತನ ಮುಖ್ಯಮಂತ್ರಿಯ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆದಿದೆ.ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಸುವೇಂದು ಅಧಿಕಾರಿ ಅವರ ಹೆಸರನ್ನು ಪಕ್ಷದ ಕಾರ್ಯಕರ್ತರು ಮತ್ತು ಶಾಸಕರ ಮುಂದೆ ಘೋಷಿಸಿದರು. ಬಂಗಾಳದಲ್ಲಿ ಹೊಸ ಸರ್ಕಾರವನ್ನು ಮುನ್ನಡೆಸಲು ಬಿಜೆಪಿ ಶಾಸಕಾಂಗ ಪಕ್ಷವು ಸುವೇಂದು ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿದೆ ಎಂದು ಹೇಳಿದರು.
