![]() |
| ಸಾಂದರ್ಭಿಕ ಚಿತ್ರ |
ಉಡುಪಿ: ಲಂಡನ್ ನಿವಾಸಿ ಎಂದು ಪರಿಚಯಿಸಿಕೊಂಡಿರುವ ಏಮಿಲ್ಲಾ ವಿಲಿಯಂ ಎಂಬವರು ಉಡುಪಿಯ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ನಡೆದಿದೆ.
ಕುತ್ಪಾಡಿ ನಿವಾಸಿ, ಮಂಗಳೂರಿನ ಹೋಟೆಲ್‌ನಲ್ಲಿ ಶೆಫ್ ಆಗಿರುವ ಪಾಂಡು ಕರಿಯಪ್ಪಾ ಪೂಜಾರಿ (62) ವಂಚನೆಗೊಳಗಾದವರು.
ಏಮಿಲ್ಡಾ ವಿಲಿಯಮ್ ಎಂಬ ಮಹಿಳೆ ದೂರುದಾರ ಕರಿಯಪ್ಪಾ ಪೂಜಾರಿ ಅವರೊಂದಿಗೆ ವಾಟ್ಸಪ್ ಮೂಲಕ ಪರಿಚಯವಾಗಿದ್ದು, ತಾನು ಲಂಡನ್ ನಿವಾಸಿ ಆಗಿರುವುದಾಗಿ ತಿಳಿಸಿದ್ದಳು. ಬಳಿಕ ಇಬ್ಬರೂ ಪರಸ್ಪರ ಚಾಟ್ ಮಾಡಿದ್ದು, ಏಮಿಲ್ಡಾ ವಿಲಿಯಂ ಅವರು ತಾನು ಭಾರತದಲ್ಲಿ ಕಾಸ್ಮೆಟಿಕ್ ಹಾಗೂ ಹೋಟೆಲ್ ವ್ಯವಹಾರ ಮಾಡುತ್ತೇನೆ, ನಿಮ್ಮನ್ನು ಭೇಟಿ ಮಾಡಲು ಮಂಗಳೂರಿಗೆ ಬರುತ್ತೇನೆ ಎಂದು ತಿಳಿಸಿದ್ದಳು.
ಅದರಂತೆ 2026ರ ಎ.7 ರಂದು ಏಮಿಲ್ಲಾ ವಿಲಿಯಂ ಎಂಬಾಕೆ ಪಾಂಡು ಕರಿಯಪ್ಪಾ ಪೂಜಾರಿ ಅವರಿಗೆ ಲಂಡನ್ ನಿಂದ ದೆಹಲಿಗೆ ಬರುವ ವಿಮಾನದ ಟಿಕೆಟ್ ನ್ನು ವಾಟ್ಸಾಪ್ ನಲ್ಲಿ ಕಳುಹಿಸಿದ್ದು, ಎ.8 ರ ಬೆಳಿಗ್ಗೆ 10 ಗಂಟೆಗೆ ಪಾಂಡು ಎಂಬವರಿಗೆ ಓರ್ವ ಮಹಿಳೆ ಕರೆ ಮಾಡಿ ನಿಮ್ಮ ಸ್ನೇಹಿತೆ ಏಮಿಲ್ಲಾ ವಿಲಿಯಂ ಅವರು ದೆಹಲಿ ವಿಮಾನ ನಿಲ್ದಾಣದಲ್ಲಿ 5 ಕೋಟಿ ಡಿಮಾಂಡ್ ಡ್ರಾಫ್ಟ್ ಹಾಗೂ ಅಧಿಕ ವಸ್ತುಗಳನ್ನು ಹೊಂದಿದ್ದಾರೆ. ಈ ಸಂಬಂಧ ನೀವು ಕೂಡಲೇ 70 ಸಾವಿರ ರೂ. ಹಣವನ್ನು ಕಟ್ಟುವಂತೆ ಹೇಳಿದ್ದು, ಆನಂತರ ಏಮಿಲ್ಲಾ ವಿಲಿಯಂ ಅವರು ಅಳುತ್ತಾ ಮಾತನಾಡಿದ್ದಾಳೆ ಎಂದು ಪಾಂಡು ಅವರು ದೂರಿನಲ್ಲಿ ತಿಳಿಸಿದ್ದಾರೆ.
ನಂತರ ಪಾಂಡು ಅವರ ಖಾತೆಯಿಂದ ಸ್ಕ್ಯಾನರ್ ಮೂಲಕ 69,400.00 ರೂ. ಹಣ ಕಳುಹಿಸಿದ್ದು, ಪುನಃ 40 ಸಾವಿರ ರೂ. ಹಣವನ್ನು ಕಳುಹಿಸುವಂತೆ ತಿಳಿಸಿದಾಗ ಪುನಃ 20 ಸಾವಿರ ರೂ. ಹಣವನ್ನು ಸ್ಕ್ಯಾನರ್ ಮುಖಾಂತರ ಕಳುಹಿಸಿ ಉಳಿದ ಹಣವನ್ನು ಅವರ ಸಂಬಂಧಿ ನಮೀತ್ ಎಂಬವರ ಖಾತೆಯಿಂದ 18,400.00 ರೂ. ಸೇರಿದಂತೆ ಒಟ್ಟು 1,13,300.00 ರೂ. ಗಳನ್ನು ವರ್ಗಾವಣೆ ಮಾಡಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
