ಉಡುಪಿ: ಉಡುಪಿ ಜಿಲ್ಲೆಯಲ್ಲಿ ಆಟೋ ಗ್ಯಾಸ್ (ಎಲ್‌ಪಿಜಿ) ಕೊರತೆ ತೀವ್ರವಾಗಿದ್ದು, ಚಾಲಕರಿಗೆ ದೊಡ್ಡ ಸಂಕಷ್ಟವಾಗಿ ಪರಿಣಮಿಸಿದೆ.ಜಿಲ್ಲೆಯಾದ್ಯಂತ ಗ್ಯಾಸ್ ಸ್ಟಾಕ್ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೆಲವೆಡೆ ಸ್ವಲ್ಪ ಪ್ರಮಾಣದಲ್ಲಿ ಸ್ಟಾಕ್ ಇದ್ದರೂ ದರ ಹೆಚ್ಚಾದ ಕಾರಣ ಆಟೋ ಚಾಲಕರು ತಕರಾರು ಮಾಡುತ್ತಿದ್ದಾರೆ.ಉದ್ಯಾವರ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಎಜೀಸ್ ಗ್ಯಾಸ್ ಏಜೆನ್ಸಿ ಹಲವು ದಿನಗಳಿಂದ ಬಂದ್ ಆಗಿರುವುದು ಪರಿಸ್ಥಿತಿಯನ್ನು ಇನ್ನಷ್ಟು ಗಂಭೀರಗೊಳಿಸಿದೆ.
ಹಿಂದೆ ಲೀಟರ್‌ಗೆ ಸುಮಾರು 60 ರೂ. ಇದ್ದ ದರ ಇದೀಗ ದುಪ್ಪಟ್ಟಾಗಿದ್ದು, ಪ್ರಸ್ತುತ 105 ರೂ. ತಲುಪಿದೆ. ದರ ಏರಿಕೆಗೆ ಚಾಲಕರಿಂದ ವಿರೋಧ ವ್ಯಕ್ತವಾಗಬಹುದು ಎಂಬ ಕಾರಣದಿಂದ ಕೆಲ ಬಂಕ್‌ಗಳು ಸ್ಟಾಕ್ ಇದ್ದರೂ ತೆರೆಯದೇ ಇರುವ ಆರೋಪವೂ ಕೇಳಿಬರುತ್ತಿದೆ.
80 ರೂ.ಗೆ ದರ ಏರಿದಾಗಲೇ ವಿರೋಧ ವ್ಯಕ್ತವಾಗಿದ್ದರೂ, ಈಗ 100 ರೂ. ಮೀರಿದೆ.ಹೀಗಾಗಿ ಬಂಕ್ ಓಪನ್ ಮಾಡುವುದೋ ಬೇಡವೋ ಎಂಬ ಉಭಯಸಂಕಟ , ಮಾಲಕರದ್ದು. ಪೆಟ್ರೋಲ್‌ಗಿಂತಲೂ ಎಲ್‌ಪಿಜಿ ದರ ಹೆಚ್ಚಾಗಿದ್ದರೂ ಉತ್ತಮ ಮೈಲೇಜ್ ಕಾರಣಕ್ಕೆ ಆಟೋ ಚಾಲಕರು ಗ್ಯಾಸ್ ಮೇಲೆಯೇ ಅವಲಂಬಿತರಾಗಿದ್ದಾರೆ.
ನಗರದ ಬಹುತೇಕ ಎಲ್ಲಾ ಗ್ಯಾಸ್ ಬಂಕ್‌ಗಳು ಬಂದ್ ಆಗಿರುವುದರಿಂದ ಆಟೋ ಚಾಲಕರ ದಿನನಿತ್ಯದ ಜೀವನೋಪಾಯಕ್ಕೆ ಹೊಡೆತ ಬಿದ್ದಿದೆ. ಸಂಬಂಧಪಟ್ಟವರು ಮಧ್ಯಪ್ರವೇಶ ಮಾಡಿ ಸಮಸ್ಯೆ ಬಗೆಹರಿಸಬೇಕಿದೆ.
