ಅಣ್ಣಾಮಲೈಗೆ ನೋ ಟಿಕೆಟ್ - ತಮಿಳುನಾಡು ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಬಿಜೆಪಿ

ಅಣ್ಣಾಮಲೈ-ಫೈಲ್ ಚಿತ್ರ

ಚೆನ್ನೈ: ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷ ಶುಕ್ರವಾರ 27 ಅಭ್ಯರ್ಥಿಗಳ ಪೂರ್ಣ ಪಟ್ಟಿಯನ್ನು ಪ್ರಕಟಿಸಿದೆ. ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಜೊತೆ ಮೈತ್ರಿ ಮಾಡಿಕೊಂಡು ಪಕ್ಷವು ಚುನಾವಣೆಗೆ ಕಣಕ್ಕಿಳಿಯಲಿದೆ.

ಪಟ್ಟಿಯಲ್ಲಿ ಐದು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿರಿಸಲಾಗಿದೆ. ತಮಿಳಿಸೈ ಸೌಂದರರಾಜನ್, ವನತಿ ಶ್ರೀನಿವಾಸನ್, ಕೀರ್ತಿಕಾ ಶಿವಕುಮಾರ್, ಕವಿತಾ ಶ್ರೀಕಾಂತ್ ಮತ್ತು ವಿಜಯಧರಣಿ ಅವರಿಗೆ ಟಿಕೆಟ್ ನೀಡಲಾಗಿದೆ. ಪಕ್ಷದ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರನ್ನು ಈ ಬಾರಿ ಸ್ಪರ್ಧೆಗೆ ಇಳಿಸದಿರುವುದು ಗಮನ ಸೆಳೆದಿದೆ.

ಅಣ್ಣಾಮಲೈ ಅವರನ್ನು ಕಣಕ್ಕಿಳಿಸಲು ಪಕ್ಷದ ಮಟ್ಟದಲ್ಲಿ ಪ್ರಯತ್ನಗಳು ನಡೆದ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಘೋಷಣೆ ವಿಳಂಬಗೊಂಡಿತ್ತು. ಆದರೆ ಅವರು ಸ್ಪರ್ಧಿಸಲು ನಿರಾಕರಿಸಿದ್ದಾಗಿ ತಿಳಿದುಬಂದಿದೆ.

ಸೀಟು ಹಂಚಿಕೆ ಕುರಿತು ಮೈತ್ರಿ ಪಾಲುದಾರ ಎಐಎಡಿಎಂಕೆ ವಿರುದ್ಧ ಅಣ್ಣಾಮಲೈ ಇತ್ತೀಚೆಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಬಿಜೆಪಿಗೆ ಸೀಮಿತ ಪ್ರಭಾವವಿರುವ ಕ್ಷೇತ್ರಗಳನ್ನು ಮಾತ್ರ ನೀಡಲಾಗಿದೆ ಎಂದು ಅವರು ಹೇಳಿದ್ದರು. 2021ರ ವಿಧಾನಸಭಾ ಚುನಾವಣೆಯಲ್ಲಿ ಅರವಕುರಿಚಿಯಿಂದ ಹಾಗೂ 2024ರ ಲೋಕಸಭಾ ಚುನಾವಣೆಯಲ್ಲಿ ಕೊಯಮತ್ತೂರಿನಿಂದ ಸ್ಪರ್ಧಿಸಿದ್ದ ಅವರು, ಎರಡೂ ಬಾರಿ ಸೋತಿದ್ದರು.

ಕೆಲವು ಕ್ಷೇತ್ರಗಳ ಉಸ್ತುವಾರಿಯಾಗಿ ನೇಮಕಗೊಂಡಿದ್ದ ಅಣ್ಣಾಮಲೈ ತಮ್ಮ ತಂದೆಯ ಆರೋಗ್ಯದ ಕಾರಣ ನೀಡಿ ಆ ಜವಾಬ್ದಾರಿಯಿಂದ ವಿನಾಯಿತಿ ಕೋರಿ ಮನವಿ ಮಾಡಿದ್ದರು.