![]() |
| ಡಾ.ಪಿ.ವಿ ಭಂಡಾರಿ |
ಉಡುಪಿ: ಇತ್ತೀಚೆಗೆ ಯುವಕನೊಬ್ಬ “ಝಾಂಬಿ ಡ್ರಗ್ಸ್” ಸೇವಿಸಿದಂತೆ ವರ್ತಿಸಿರುವ ವಿಡಿಯೋ ವೈರಲ್ ಆಗಿತ್ತು.ಇದು ಸಾಕಷ್ಟು ಆತಂಕಕ್ಕೂ ಕಾರಣ ಆಗಿತ್ತು.ಬಳಿಕ ಸ್ಪಷ್ಟನೆ ನೀಡಿದ್ದ ಗೃಹ ಸಚಿವರು ,ಝಾಂಬಿ ಡ್ರಗ್ಸ್ ಬಗ್ಗೆ ವದಂತಿ ಹಬ್ಬುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು ,ಮಾತ್ರವಲ್ಲ ,ಓರ್ವ ಯುವಕನನ್ನು ಈ ಸಂಬಂಧ ಬಂಧಿಸಲಾಗಿತ್ತು ಕೂಡ.
ಈ ಹಿನ್ನೆಲೆಯಲ್ಲಿ, ಖ್ಯಾತ ಮನೋರೋಗ ತಜ್ಞ ಡಾ. ಪಿ.ವಿ. ಭಂಡಾರಿ ಸ್ಪಷ್ಟನೆ ನೀಡಿದ್ದಾರೆ.
ಅಮೆರಿಕದಲ್ಲಿ 2016ರಲ್ಲಿ ವರದಿಯಾದ ಈ ವೆಟರ್ನರಿ ಡ್ರಗ್ ಪ್ರಾಣಿಗಳಿಗೆ ಅರಿವಳಿಕೆ ನೀಡಲು ಬಳಸಲಾಗುತ್ತದೆ. ಮನುಷ್ಯರು ಬಳಸಿದರೆ ಚರ್ಮದಲ್ಲಿ ಗಾಯಗಳು, ಪ್ರತಿಮೆಯಂತೆ ನಿಂತುಕೊಳ್ಳುವ ವರ್ತನೆ ಕಾಣಿಸಿಕೊಳ್ಳುತ್ತದೆ. ಆದರೆ ಭಾರತದಲ್ಲಿ ಇದರ ಬಳಕೆ ಕಂಡುಬಂದಿಲ್ಲ ಎಂದು ಅವರು ತಿಳಿಸಿದ್ದಾರೆ.
ಬೆಂಗಳೂರು ಮತ್ತು ಚಂಡೀಗಢದಲ್ಲಿ ವೈರಲ್ ಆದ 30 ಸೆಕೆಂಡ್ ವಿಡಿಯೋ ಆಧರಿಸಿ ತಪ್ಪು ನಿರ್ಧಾರ ಕೈಗೊಳ್ಳಬಾರದು. ಬಿಸಿಲು ಅಥವಾ ಹೈಪೋಗ್ಲೈಸೀಮಿಯಾ ಸೇರಿದಂತೆ ಅನೇಕ ಕಾರಣಗಳಿಂದ ಈ ರೀತಿಯ ವರ್ತನೆ ಮನುಷ್ಯರಲ್ಲಿ ಕಾಣಿಸಬಹುದು.ಇಂತಹ ಸಂದರ್ಭಗಳಲ್ಲಿ ವಿಡಿಯೋ ಮಾಡುವ ಬದಲು ಅಂಥವರಿಗೆ ಸಹಾಯ ಮಾಡಿ ಎಂದು ಭಂಡಾರಿ ಸಲಹೆ ನೀಡಿದ್ದಾರೆ.
ನಮ್ಮಲ್ಲಿ ಝಾಂಬಿ ಬಳಕೆ ಇಲ್ಲ ,ಈ ಬಗ್ಗೆ ಅನಗತ್ಯ ಭಯ ಹರಡಿಸಬೇಡಿ. ಅದರ ಬದಲು ನಮ್ಮಲ್ಲಿ ಚಾಲ್ತಿಯಲ್ಲಿರುವ ಗಾಂಜಾ, ಅಫೀಮು, ನಿದ್ರೆ ಮಾತ್ರೆ ,ಎಂಡಿಎಂಎಗಳಂತಹ ಮಾದಕ ದ್ರವ್ಯಗಳ ನಿಯಂತ್ರಣದ ಕಡೆ ಹೆಚ್ಚು ಗಮನ ಹರಿಸೋಣ.ಇವು ನಮ್ಮ ಯುವಜನತೆಯನ್ನು ನಿಜವಾಗಿಯೂ ಹಾಳು ಮಾಡುತ್ತಿವೆ.ಇವುಗಳ ಬಳಕೆ ವಿರುದ್ಧ ಎಚ್ಚರ ಅಗತ್ಯ ಎಂದು ಮನವಿ ಮಾಡಿದ್ದಾರೆ.
