ಉಡುಪಿ: ಜಿಲ್ಲಾ ಭಾರತೀಯ ಜನತಾ ಪಾರ್ಟಿಗೆ ದೇಶದಲ್ಲೇ ಒಂದು ಹೆಸರಿದೆ. ಅದರಲ್ಲೂ ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಹೊಸ ಮೈಲೇಜ್ ಕೊಟ್ಟ ಜಿಲ್ಲೆಯಾಗಿದೆ. ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ನಗರಸಭೆಯನ್ನು ಭಾಜಪಾ ತೆಕ್ಕೆಗೆ ತೆಗೆದುಕೊಂಡ ಜಿಲ್ಲೆ ಇದ್ದರೆ ಅದು ಉಡುಪಿ ಜಿಲ್ಲೆ. ಇಂತಹ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಸೇವೆ ಸಲ್ಲಿಸುವ ಸಂಘಟನಾತ್ಮಕವಾದ ಜಿಲ್ಲೆಗೆ ಸುಸಜ್ಜಿತವಾದ ಜಿಲ್ಲಾ ಪಕ್ಷದ ಕಾರ್ಯಾಲಯ ಬೇಕೆನ್ನುವ ಅದೆಷ್ಟೋ ವರ್ಷಗಳ ಕನಸು ಈಗ ನನಸಾಗುತ್ತಿದೆ. ಆದರೆ ಈಗ ಇದನ್ನು ಸಂಭ್ರಮಿಸಬೇಕೋ ಅಥವಾ ಬೇಸರಿಸಬೇಕೋ ಎನ್ನುವ ಜಿಜ್ಞಾಸೆಗೆ ಬಿದ್ದಿದ್ದೇವೆ. ವೈಯಕ್ತಿಕವಾಗಿ ಮತ್ತು ನನ್ನಂತೆ ಒಂದಷ್ಟು ಜನರ, ಒಂದಷ್ಟು ಕಾರ್ಯಕರ್ತರ ಮತ್ತು ಒಂದಷ್ಟು ಅಭಿಮಾನಿಗಳ ಬೇಸರಕ್ಕೂ ಈ ಒಂದು ಕ್ಷಣ ಕಾರಣವಾಗುತ್ತಿದೆ ಎಂದು ಹೇಳಿಕೊಳ್ಳಲು ವಿಷಾದವೆನಿಸುತ್ತಿದೆ.
ಮಾಜಿ ಶಾಸಕರಾದ ಕೆ ರಘುಪತಿ ಭಟ್ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದವರು. ಈಗ ಶಿಲಾನ್ಯಾಸಗೊಳ್ಳುತ್ತಿರುವ ಅದೇ ಜಿಲ್ಲಾ ಕಚೇರಿಯ ವ್ಯಾಪ್ತಿಯ ಭಾಜಪಾ ಸ್ಥಾನೀಯ ಸಮಿತಿಯ ಅಧ್ಯಕ್ಷರಾಗಿದ್ದವರು ಕೆ ರಘುಪತಿ ಭಟ್ ರವರು. ನಂತರ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾಗಿ, ಜಿಲ್ಲಾ ಭಾಜಪಾ ಅಧ್ಯಕ್ಷರಾಗಿ, ಶಾಸಕರಾಗಿಯೂ ಸೇರಿದಂತೆ ಪಕ್ಷದ ವಿವಿಧ ಜವಾಬ್ದಾರಿಯನ್ನು ಸಮರ್ಥವಾಗಿ ನಡೆಸಿಕೊಂಡು ಬಂದು ಪಕ್ಷವನ್ನು ಕಟ್ಟಿದವರು. ಅವರ ಕಾರ್ಯಕ್ಷಮತೆಯನ್ನು ಗುರುತಿಸಿ ಭಾಜಪಾ ಸರ್ಕಾರದ ಅವಧಿಯಲ್ಲಿ ಅವರನ್ನು ಸರ್ಕಾರಿ ಭರವಸೆಗಳ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿತ್ತು. ಸಚಿವರಾಗುವ ಎಲ್ಲಾ ಅರ್ಹತೆ ಇದ್ದರೂ ಕೂಡ ಸಚಿವ ಸ್ಥಾನವನ್ನು ಅವರು ಅಪೇಕ್ಷಿಸದೆ ಅಂದು ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಸುನಿಲ್ ಕುಮಾರ್ ರವರನ್ನು ಬೆಂಬಲಿಸಿದ್ದರು. ಪಕ್ಷ ನಿಲ್ಲು ಎಂದಾಗ ನಿಂತು ಗೆದ್ದಿದ್ದಾರೆ, ನಿಲ್ಲಬೇಡ ಎಂದಾಗ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಿದ್ದಾರೆ. ಅರ್ಹತೆ ಇದ್ದರೂ ಕೂಡ 2013 ಹಾಗೂ 2023ರ ಚುನಾವಣೆಯಲ್ಲಿ ಟಿಕೆಟ್ ಸಿಗದಿದ್ದಾಗ ಪಕ್ಷದ ಅಭ್ಯರ್ಥಿಯ ಪರವಾಗಿ ಪ್ರಾಮಾಣಿಕ ಕೆಲಸ ಮಾಡಿದ ರಾಜ್ಯದ ಅತ್ಯಂತ ಅಪರೂಪದ ರಾಜಕಾರಣಿ ಇದ್ದರೆ ಅದು ರಘುಪತಿ ಭಟ್ ಅವರು ಮಾತ್ರ.
ಕಳೆದ ಬಾರಿ ಅವರು ಶಾಸಕರಿರುವಾಗ ಜಿಲ್ಲಾ ಕಟ್ಟಡ ನಿರ್ಮಾಣ ಮಾಡಲು ಭೂಮಿ ಖರೀದಿಸಲು ಬರೋಬ್ಬರಿ 25 ಲಕ್ಷ ರೂಪಾಯಿಗಳನ್ನು ನೀಡಿದ್ದರು. ಪಕ್ಷದ ಕಾರ್ಯಾಲಯ ಸದೃಢವಾಗಿ ನಿರ್ಮಾಣಗೊಳ್ಳಬೇಕೆಂಬ ಆಸೆ ರಘುಪತಿ ಭಟ್ ರವರಿಗೆ ಎಲ್ಲರಿಗಿಂತ ಹೆಚ್ಚಾಗಿಯೇ ಇತ್ತು. ಕಾಪು ಮಾಜಿ ಶಾಸಕರಾದ ಲಾಲಾಜಿ ಮೆಂಡನ್ ರವರು ಕೂಡ ಸಾಲ ಮಾಡಿ ದೇಣಿಗೆ ಕೊಟ್ಟಿದ್ದರೆಂಬ ಮಾಹಿತಿಯೂ ಇದೆ. ಪಕ್ಷ ಪ್ರೇಮ ಅಷ್ಟೊಂದಿತ್ತು... ಆದರೆ ಇಂದಿನ ಬೆಳವಣಿಗೆಯಲ್ಲಿ ನಾನಾಗಲಿ, ರಘುಪತಿ ಭಟ್ ರವರಾಗಲಿ ಪಕ್ಷದಿಂದ ತಳ್ಳಲ್ಪಟ್ಟವರಾಗಿದ್ದೇವೆ. ಯಾವುದೋ ಕಾರಣದಿಂದಾಗಿ ಪಕ್ಷ ನಮ್ಮನ್ನು ಸಹಜವಾಗಿಯೇ ದೂರವಿಟ್ಟಿದೆ. ಅದರಲ್ಲೇನು ನಮಗೆ ಬೇಸರವಿಲ್ಲ. ಆದರೆ ಕನಿಷ್ಠಪಕ್ಷ ಕಚೇರಿ ಶಿಲನ್ಯಾಸಗೊಳ್ಳುವಾಗ ಸೌಜನ್ಯಕ್ಕಾದರೂ ಆಹ್ವಾನ ನೀಡಬೇಕೆಂಬ ಚಿಂತನೆ ಪಕ್ಷಕ್ಕಿರಬೇಕಿತ್ತಲ್ಲವೇ? ಎಂದು ಮಹೇಶ್ ಠಾಕೂರ್ ( ಮಾಜಿ ಅಧ್ಯಕ್ಷರು, ಉಡುಪಿ ನಗರ ಬಿಜೆಪಿ, ಉಡುಪಿ ನಗರಸಭಾ ಮಾಜಿ ಸದಸ್ಯರು) ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
